ADVERTISEMENT

ತಿಪಟೂರು: ತೆಂಗು ಸಂಶೋಧನಾ ಕೇಂದ್ರ, ಭೂ ದಾಖಲೆ ಸರಳೀಕರಣಕ್ಕೆ ಒತ್ತಾಯ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:21 IST
Last Updated 10 ಫೆಬ್ರುವರಿ 2026, 5:21 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ರೈತ ಸಂಘ, ಹಸಿರು ಸೇನೆ (ಸಾಮೂಹಿಕ ನಾಯಕತ್ವ)ಯಿಂದ ಪ್ರತಿಭಟನೆ ನಡೆಯಿತು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ರೈತ ಸಂಘ, ಹಸಿರು ಸೇನೆ (ಸಾಮೂಹಿಕ ನಾಯಕತ್ವ)ಯಿಂದ ಪ್ರತಿಭಟನೆ ನಡೆಯಿತು   

ತಿಪಟೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ (ಸಾಮೂಹಿಕ ನಾಯಕತ್ವ) ವತಿಯಿಂದ ತಾಲ್ಲೂಕು ಆಡಳಿತ ಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.

ತೆಂಗಿಗೆ ರೋಗಬಾಧೆ ಹೆಚ್ಚಾಗಿದೆ. ಮರಗಳು ಹಾನಿಗೊಳಗಾಗಿ ಇಳುವರಿ ಭಾರೀ ಕುಸಿತವಾಗಿದೆ. ಔಷಧಿ ಕೊರತೆ ಇದ್ದು ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಅಧ್ಯಯನ ಪರಿಶೀಲನೆ ನಡೆಸುತ್ತಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ತಿಪಟೂರಿನಲ್ಲಿ ತೆಂಗು ಸಂಶೋಧನಾ ಕೇಂದ್ರ ಆರಂಭಿಸಿ ತಕ್ಷಣ ಸಂಶೋಧನೆ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿ, ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ. ಯುವಕರು ಮತ್ತು ಹದಿಹರೆಯದ ಮಕ್ಕಳು ಮದ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. ಹಳ್ಳಿಗಳು ಕುಡುಕರ ಅಡ್ಡೆಗಳಾಗುತ್ತಿವೆ. ತಕ್ಷಣವೇ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ರೈತರು ಆಗ್ರಹಿಸಿದರು.

ADVERTISEMENT

ಬೆಸ್ಕಾಂಗೆ ಮನವಿ ಸಲ್ಲಿಸಿ, ಬೇಸಿಗೆಯಲ್ಲಿ ವೋಲ್ಟೇಜ್ ಕೊರತೆಯಿಂದ ರೈತರ ಮೋಟಾರ್‌ ಸುಟ್ಟು ನಷ್ಟವಾಗುತ್ತಿದೆ. ಅಗತ್ಯವಿರುವ ಕಡೆ ಹೆಚ್ಚುವರಿ ಪರಿವರ್ತಕ ಅಳವಡಿಸಿ ಸ್ಥಿರ ವಿದ್ಯುತ್ ಸರಬರಾಜು ನೀಡಬೇಕು. ಪರಿವರ್ತಕ ಸುಟ್ಟರೆ ಎರಡು ದಿನಗಳೊಳಗೆ ಸರಿಪಡಿಸಿ ಅಳವಡಿಸಬೇಕು. ವಿದ್ಯುತ್ ಖಾಸಗೀಕರಣಕ್ಕೆ ರೈತಸಂಘದ ವಿರೋಧವಿದೆ ಎಂದರು.

ಭೂ ದಾಖಲೆಗಳ ಕೊರತೆಯಿಂದ ಅನೇಕ ರೈತರು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಮಹಜರು ಮಾಡಿ ದಾಖಲೆ ವಂಚಿತ ರೈತರಿಗೆ ಕಾಲಮಿತಿಯಲ್ಲಿ ಖಾತೆ, ಪಹಣಿ ಸೇರಿದಂತೆ ದಾಖಲಾತಿ ಮಾಡಿಕೊಡಬೇಕು. ಬಗರ್ ಹುಕುಂ ರೈತರಿಗೆ ತಕ್ಷಣವೇ ಹಕ್ಕುಪತ್ರ ನೀಡಿ ಎಂದು ಕಂದಾಯ ಇಲಾಖೆಗೆ ಹಕ್ಕೊತ್ತಾಯಿಸಿದರು.

ಪ್ರಾಂತ ರೈತ ಸಂಘದ ಅಧ್ಯಕ್ಷ ರಂಗಾಪುರ ಚನ್ನಬಸವಣ್ಣ ಮಾತನಾಡಿ, ಬಡ ರೈತರಿಗೆ ಭೂಮಿ ನೀಡಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ದೊಡ್ಡ ಕಂಪನಿಗಳಿಗೆ ಮಾತ್ರ ಸಾವಿರಾರು ಎಕರೆ ಭೂಮಿ ನೀಡಲಾಗುತ್ತಿದೆ. ಬಗರ್ ಹುಕುಂ ಸಾಗುವಳಿ ಚೀಟಿ ನೀಡಬೇಕು. ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದರು.

ರೈತ ಸಂಘದ ತಾ.ಅಧ್ಯಕ್ಷ ಜಯಾನಂದಯ್ಯ ಮಾತನಾಡಿ, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಖಾತರಿ ನೀಡಬೇಕು. ತುಮಕೂರು ಜಿಲ್ಲೆ ತೆಂಗು ಬೆಳೆಯ ಪ್ರಮುಖ ಪ್ರದೇಶವಾಗಿರುವುದರಿಂದ ಈ ಸಾಲಿನ ಬಜೆಟ್‌ನಲ್ಲಿ ತಿಪಟೂರಿನಲ್ಲಿ ತೆಂಗು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ತೆಂಗು ಹಾಗೂ ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಹಸಿರು ಸೇನೆಯ ತಿಮ್ಲಾಪುರ ದೇವರಾಜು, ಬಿಳಿಗೆರೆಪಾಳ್ಯ ನಾಗೇಶ್, ಶ್ರೀಕಾಂತ್ ಕೆಳಹಟ್ಟಿ, ನಾಗರಾಜು ತಡಸೂರು, ಷಡಕ್ಷರಿ ಗಡಬನಹಳ್ಳಿ, ಸಿದ್ದಯ್ಯ ಬನ್ನಿಹಳ್ಳಿ, ಶಿವಶಂಕರಯ್ಯ, ತಿಮ್ಮೇಗೌಡ ಗಡಬನಹಳ್ಳಿ, ರಾಜಮ್ಮ, ಸಿದ್ದಯ್ಯ ಬಳವನೇರಲು, ಬಸವರಾಜು, ಚಂದ್ರಶೇಖರ್, ದೇವಾನಂದ್, ಅಲ್ಲಾಬಕಾಷ್ ಉಪಸ್ಥಿತರಿದ್ದರು.

ತಾಲ್ಲೂಕು ಆಡಳಿತ ಸೌಧದ ಮುಂಭಾಗ ನಡೆದ ಪ್ರತಿಭಟನಾ ಸ್ಥಳದಲ್ಲಿ ತಹಶೀಲ್ದಾರ್ ಮೋಹನ್‌ಕುಮಾರ್ ಕುಳಿತು ರೈತರ ಸಮಸ್ಯೆಗಳನ್ನು ಆಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.