ADVERTISEMENT

ತಿಪಟೂರು: ಗ್ರಾ.ಪಂ ನಕಲಿ ಬಿಲ್ಲು ಅವ್ಯವಹಾರ- ಪ್ರತಿಭಟನೆ

ತಿಪಟೂರಿನಲ್ಲಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 6:41 IST
Last Updated 12 ಆಗಸ್ಟ್ 2025, 6:41 IST
ತಿಪಟೂರು ಬಿಜೆಪಿ ಘಟಕದಿಂದ ಮಾಜಿ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು
ತಿಪಟೂರು ಬಿಜೆಪಿ ಘಟಕದಿಂದ ಮಾಜಿ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು   

ತಿಪಟೂರು: ಕಾಂಗ್ರೆಸ್ ಆಡಳಿತದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ನಕಲಿ ಬಿಲ್ಲುಗಳ ಅವ್ಯವಹಾರ ವಿರುದ್ಧ ತಿಪಟೂರು ತಾಲ್ಲೂಕು ಬಿಜೆಪಿ ಘಟಕದಿಂದ ಮಾಜಿ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕುಪ್ಪಾಳು ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿ ಅವ್ಯವಹಾರ ಹಾಗೂ ಅರಳಗುಪ್ಪೆ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಡೆಯುತ್ತಿರುವ ಅವ್ಯವಹಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಯಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಒಂದಾಗಿನಿಂದ ಹಲವಾರು ಹಗರಣಗಳಲ್ಲಿ ಭಾಗಿಯಾಗಿದೆ. ತಾಲ್ಲೂಕಿನಲ್ಲೂ ಭ್ರಷ್ಟಾಚಾರ ಮುಂದುವರೆದಿದೆ. ಕುಪ್ಪಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಆರೋಪಿಸಿರುವಂತೆ ಕಾಮಗಾರಿ ನಡೆಸದೆಯೇ ಬಿಲ್ ಪಡೆಯಲಾಗಿದೆ. ತಂತಿ ಬೇಲಿ ನಿರ್ಮಾಣ ಮಾಡಲಾಗಿದೆ ಎಂದು, ಕೊಡ್ಲಿಘಟ್ಟ ಗ್ರಾಮದಲ್ಲಿ ಬಸಿಕಾಲುವೆ ನಿರ್ಮಾಣ ಮಾಡಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಬಿಲ್ ಪಡೆಯಲಾಗಿದೆ ಎಂದರು.

ADVERTISEMENT

ಅರಳಗುಪ್ಪೆ ಇಂದಿರಾಗಾಂಧಿ ವಸತಿಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ. ಕಳಪೆ ಗುಣಮಟ್ಟದ ಆಹಾರ ಸೇವನೆ ಮಾಡಿ 6 ಮಕ್ಕಳು ಅಸ್ವಸ್ಥರಾಗಿದ್ದಾರೆ. ತಾ.ಪಂ ಇಒ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.

ಜಿಲ್ಲಾ ಉಪಾಧ್ಯಕ್ಷ ಹರೀಸಮುದ್ರ ಗಂಗಾಧರ್ ಮಾತನಾಡಿ, ತಾಲ್ಲೂಕಿನಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಶಾಸಕರು, ಮಾಜಿ ಸಚಿವರ ಕಾಲಾವಧಿಯಲ್ಲಿ ಮಂಜೂರಾದ ಕಾಮಗಾರಿಗೆ ಭೂಮಿಪೂಜೆ ಮಾಡುವ ಕೆಲಸದಲ್ಲಿ ಕಾಲ ಕಳೆಯುತ್ತಿದ್ದಾರೆ. ಜಲಜೀವನ ಮಿಷನ್ ಯೋಜನೆ ಗುತ್ತಿಗೆಯಲ್ಲಿ ಪಕ್ಷಪಾತ ಮಾಡುತ್ತಿದ್ದು ಕಾಮಗಾರಿ ಮಾಡಲು ಗುತ್ತಿಗೆ ಪಡೆದ ಬಿಜೆಪಿ ಮುಖಂಡರಿಗೆ ತೊಂದರೆ ನೀಡಲಾಗುತ್ತಿದೆ. ದ್ವೇಷ ರಾಜಕಾರಣ ಮುಂದುವರೆದರೆ ಹೋರಾಟ ನಡೆಸಬೇಕಾಗುತ್ತದೆ ಎಂದರು.

ತಾಲ್ಲೂಕು ಪಂಚಾಯಿತಿ ಇಒಗೆ ಮನವಿ ಸಲ್ಲಿಸಿ, ಗ್ರಾಮ ಪಂಚಾಯಿತಿಗಳ ನಕಲಿ ಬಿಲ್ಲುಗಳ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತೀಶ್, ನಗರಾಧ್ಯಕ್ಷ ಹಳೇಪಾಳ್ಯ ಜಗದೀಶ್, ಬಳ್ಳೆಕಟ್ಟೆ ಸುರೇಶ್, ರೂಪಾಮಂಜುನಾಥ್, ಬೋಜೆಗೌಡ, ಉದಯ್‌ಕುಮಾರ್, ವಿಶ್ವನಾಥ್, ರಂಗಸ್ವಾಮಿ, ಶಶಿಕಿರಣ್, ಮೋಹನ್‌ಕುಮಾರ್, ಪದ್ಮತಿಮ್ಮೆಗೌಡ, ಜಯಲಕ್ಷ್ಮಿ, ಹಾಲ್ಕುರಿಕೆ ನಾಗರಾಜು, ಆಯರಹಳ್ಳಿ ಶಂಕರಪ್ಪ, ವಿಶ್ವದೀಪು, ಸದಾಶಿವಯ್ಯ, ಉಮಾಶಂಕರ್, ಪ್ರಕಾಶ್, ಕೆರಗೋಡಿ ಸತೀಶ್, ಷಣ್ಮಖ, ಸೂಗೂರು ದೀಲೀಪ್, ಹಳೇಪಾಳ್ಯ ಮಂಜುನಾಥ್, ಬಾಲರಾಜ್ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.