ತಿಪಟೂರು: ತಾಲ್ಲೂಕಿನ ಕೋಟನಾಯಕನಹಳ್ಳಿ ಹತ್ತಿರದ ಬೆಂಗಳೂರು– ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದರು.
ಭಾನುವಾರ ರಾತ್ರಿ ಸುರಿದ ಮಳೆಯಿಂದ ಕೋಟನಾಯಕನಹಳ್ಳಿ, ಮಡೆನೂರು ಹಾಗೂ ಸಿದ್ದಾಪುರದ ಬಳಿ ರಸ್ತೆಗಳು ಜಲಾವೃತವಾಗಿದ್ದವು. ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿವೆ. ಇದರಿಂದ ಎಲ್ಲ ವಾಹನಗಳು ಸರ್ವೀಸ್ ರಸ್ತೆ ಮುಖಾಂತರ ಚಲಿಸಬೇಕಿದೆ. ಈ ರಸ್ತೆಯಲ್ಲೂ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಕೆಎಸ್‌ಆರ್‌ಟಿಸಿ ಬಸ್, ಆಟೊ ನೀರಿನಿಂದ ಆವೃತವಾಗಿದ್ದ ರಸ್ತೆಯಲ್ಲಿ ಸಾಗಿದವು. ಕೆಲ ವಾಹನಗಳು ರಸ್ತೆ ಮಧ್ಯೆ ಕೆಟ್ಟು ನಿಂತಿದ್ದ ದೃಶ್ಯಗಳು ಕಂಡು ಬಂದವು. ಕೆಳ ಸೇತುವೆ ಅವೈಜ್ಞಾನಿಕ ಕಾಮಕಾರಿಗಳಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಸಮಸ್ಯೆಯಾಯಿತು. ಪ್ರತಿ ಸಾರಿ ಮಳೆ ಬಂದಾಗಲೂ ಈ ಸಮಸ್ಯೆ ಪುನರಾವರ್ತನೆಯಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕಂಡರೂ ಕಾಣದಂತೆ ಇದ್ದಾರೆ ಎಂಬುವುದು ಸ್ಥಳೀಯರ ಆರೋಪ.
‘ಯಾವುದೇ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ, ವೈಜ್ಞಾನಿಕವಾಗಿಯೂ ಇಲ್ಲ. ಮಳೆ ಬಂದರೆ ರಸ್ತೆ ನದಿಯಂತಾಗುತ್ತದೆ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ನೀರು ನಿಲ್ಲದಂತೆ ಮಾಡುತ್ತಿಲ್ಲ. ನೀರು ನಿಂತು ಜನರು ಪರದಾಡಿದರೂ ಅಧಿಕಾರಿಗಳು ಸ್ಪಂದಿಸುವುದಿಲ್ಲ’ ಎಂದು ಕೋಟನಾಯಕನಹಳ್ಳಿ, ಮಡೆನೂರು ಹಾಗೂ ಸಿದ್ದಾಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.