ADVERTISEMENT

ತಿಪಟೂರು | ‘ಹಾಸ್ಯ ಚಕ್ರವರ್ತಿ’ ನರಸಿಂಹರಾಜು ಭವನ ಅನಾಥ, ಹುಟ್ಟಿದ ಮನೆ ಶಿಥಿಲ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 6:04 IST
Last Updated 7 ಫೆಬ್ರುವರಿ 2026, 6:04 IST
ಅನಾಥ ಸ್ಥಿತಿಯಲ್ಲಿರುವ ನರಸಿಂಹರಾಜು ಭವನ
ಅನಾಥ ಸ್ಥಿತಿಯಲ್ಲಿರುವ ನರಸಿಂಹರಾಜು ಭವನ   

ತಿಪಟೂರು: ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ಎಂದು ಹೆಸರಾದ ದಿ.ಟಿ.ಆರ್.ನರಸಿಂಹರಾಜು ಅವರು ತಿಪಟೂರಿನಲ್ಲಿ ಜನಿಸಿದ್ದ ಕಾರಣ, ಅವರ ಸ್ಮರಣಾರ್ಥವಾಗಿ ಸರ್ಕಾರದಿಂದ ನರಸಿಂಹರಾಜು ಭವನ ನಿರ್ಮಿಸಲಾಗಿತ್ತು. ಈ ಭವನ ಒಮ್ಮೆ ಅಧಿಕೃತ ಉದ್ಘಾಟನೆಯೂ ನಡೆದಿತ್ತು. ಆದರೆ ಅದು ಸಾರ್ವಜನಿಕರ ಸೇವೆಗೆ ಸಮರ್ಪಕವಾಗಿ ಲಭ್ಯವಾಗದೆ, ಬೀಗ ಹಾಕಿದ ಅನಾಥ ಕಟ್ಟಡದಂತಾಗಿದೆ.

ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲಾದ ನರಸಿಂಹರಾಜು ಭವನವು, ಇಂದಿಗೂ ಚಟುವಟಿಕೆಗಳಿಲ್ಲದೆ ನಿಷ್ಕ್ರಿಯ ಸ್ಥಿತಿಯಲ್ಲಿದೆ. ಸರ್ಕಾರದ ಹಣದಿಂದ ನಿರ್ಮಾಣಗೊಂಡ ಕಟ್ಟಡವು ಸಾರ್ವಜನಿಕ ಸೇವೆಗೆ ಲಭ್ಯವಿಲ್ಲದೆ ಇರುವುದು, ಸರ್ಕಾರದ ಹಣದ ಲೋಪದೋಷ ಮತ್ತು ಯೋಜನಾ ನಿರ್ವಹಣೆಯ ವೈಫಲ್ಯದ ಸಾಕ್ಷಿಯಾಗಿದೆ.

ಹುಟ್ಟಿದ ಮನೆ ಶಿಥಿಲ: ಒಂದು ಕಡೆ ಸರ್ಕಾರ ನಿರ್ಮಿಸಿರುವ ನರಸಿಂಹರಾಜು ಭವನವೇ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೆ, ಮತ್ತೊಂದು ಕಡೆ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರು ಹುಟ್ಟಿ ಬೆಳೆದ ಮೂಲಮನೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ.

ADVERTISEMENT

1923ರ ಜುಲೈ 10ರಂದು ತಿಪಟೂರಿನಲ್ಲಿ ಜನಿಸಿದ ಟಿ.ಆರ್.ನರಸಿಂಹರಾಜು ಕಲಾವಿದನಾಗಿ ರೂಪುಗೊಂಡ ಮನೆ ಇಂದು ಪಾಳುಬಿದ್ದ ಕೋಟೆಯಂತಾಗಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಚಾವಣಿ ಕುಸಿಯುವ ಹಂತದಲ್ಲಿವೆ. 

ಈ ಮನೆ ಕೇವಲ ಖಾಸಗಿ ಕಟ್ಟಡವಲ್ಲದೆ ಇದು ಕನ್ನಡ ಚಿತ್ರರಂಗದ ಇತಿಹಾಸದ ಒಂದು ಜೀವಂತ ಅಂಶವಾಗಿದೆ. ಡಾ.ರಾಜ್‌ಕುಮಾರ್ ಅವರೊಂದಿಗೆ ಸ್ನೇಹದ ಮೂಲಕ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ಅನೇಕ ಚಿತ್ರಗಳಲ್ಲಿ ಅಭಿನಯಿಸಿ, ವಿಶಿಷ್ಟ ಹಾಸ್ಯ ಶೈಲಿಯಿಂದ ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ಕಲಾವಿದನ ಸ್ಮೃತಿ ಹೊತ್ತುಕೊಂಡ ಸ್ಥಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ನರಸಿಂಹರಾಜು ಅವರ ಮನೆ ಹಾಗೂ ಭವನವನ್ನು ಅಭಿವೃದ್ಧಿಪಡಿಸಿದರೆ, ಕನ್ನಡ ಚಿತ್ರರಂಗದ ಅಭಿಮಾನಿಗಳು ತಿಪಟೂರಿಗೆ ಭೇಟಿ ನೀಡುತ್ತಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳ ಅಧ್ಯಯನ ಪ್ರವಾಸಗಳು ಹೆಚ್ಚುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಈಗಾಗಲೇ ಅವರ ಮನೆಯ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಶಾಸಕ ಕೆ.ಷಡಕ್ಷರಿ ಸ್ಥಳವನ್ನು ಸ್ಮಾರಕವಾಗಿ ಮಾಡಬೇಕೆಂದು ತಿಳಿಸಿದ್ದಾರೆ. ಮನೆಯನ್ನು ನವೀಕರಣ ದೃಷ್ಟಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆಕರೆದು ಸಂಘ ಸಂಸ್ಥೆಗಳ ಸಹಕಾರದಿಂದ ಅಭಿವೃದ್ಧಿಪಡಿಸುವ ಚಿಂತನೆ ಮಾಡಲಾಗಿದೆ ಎಂದು ತಹಶೀಲ್ದಾರ್ ಮೋಹನ್‌ಕುಮಾರ್ ತಿಳಿಸಿದರು.

ಭವನ ಲೋಕಾರ್ಪಣೆಗೊಂಡರೆ ಮತ್ತಷ್ಟು ಕಲಾವಿದರು ಬೆಳಕಿಗೆ ಬರುತ್ತಾರೆ. ಸಾಂಸ್ಕೃತಿಕ ವೇದಿಕೆಗೆ ಭವನ ಆಶ್ರಯವಾಗಬೇಕು. ಮಹಾನ್ ಕಲಾವಿದನ ಹುಟ್ಟಿದ ಮನೆ ಹೀಗೆ ಕುಸಿದು ಹೋಗುವುದು ತಿಪಟೂರು ಹಾಗೂ ರಾಜ್ಯದ ಸಾಂಸ್ಕೃತಿಕ ಗೌರವಕ್ಕೆ ಧಕ್ಕೆ.
ದಯಾನಂದಸಾಗರ್, ಕಿರುತರೆ ನಟ
ನರಸಿಂಹರಾಜು ಬೆಂಗಳೂರಿಗೆ ಹೋದ ನಂತರವು ಸಹ ಬಂದು ಹೋಗುತ್ತಿದ್ದರು. ಭವನ ಹುಟ್ಟಿದ ಮನೆ ಎರಡನ್ನೂ ಸಂರಕ್ಷಿಸಿ ಸಾಂಸ್ಕೃತಿಕ ಪ್ರವಾಸೋದ್ಯಮ ಕೇಂದ್ರಗಳಾಗಿ ರೂಪಿಸಬೇಕು.
ಗೋವಿಂದರಾಜು, ಸ್ಥಳೀಯ
ನಿರ್ಲಕ್ಷ್ಯಕ್ಕೆ ಒಳಗಾಗಿರುವ ನರಸಿಂಹರಾಜು ಮನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.