
ತಿಪಟೂರು: ನಗರದಲ್ಲಿ ನಗರಸಭೆ ವಿಶೇಷ ಅನುದಾನದಲ್ಲಿ ಅಳವಡಿಸಿರುವ ಸಂಚಾರ ದೀಪಗಳು ನಿರ್ವಹಣೆ ಕೊರತೆಯಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸದೆ ವಾಹನ ಸವಾರರನ್ನು ಗೊಂದಲಕ್ಕೀಡು ಮಾಡುತ್ತಿವೆ.
ನಗರದ ಮೂರು ವೃತ್ತಗಳಲ್ಲಿ ಆಳವಡಿಸಿರುವ ಸಂಚಾರಿ ದೀಪಗಳು ಒಂದು ದಿನ ಕಾರ್ಯನಿರ್ವಹಿಸುತ್ತದೆ ಮರುದಿನ ತಟಸ್ಥವಾಗುತ್ತದೆ. ಗಂಟೆಗೊಮ್ಮೆ ಸ್ಥಗಿತಗೊಳ್ಳುತ್ತಿವೆ.
2023ರ ಮಾರ್ಚ್‌ನಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು. ಹಾಸನ ವೃತ್ತದ ಸಂಚಾರ ದೀಪಕ್ಕೆ 19 ಲಕ್ಷ, ಅಂಬೇಡ್ಕರ್ ಹಾಗೂ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ₹40 ಲಕ್ಷ ವ್ಯಯಿಸಲಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಅವು ನಲುಗಿವೆ.
‘ಗುತ್ತಿಗೆದಾರನಿಗೆ ನಗರಸಭೆಯಿಂದ ಸೂಕ್ತ ಹಣ ನೀಡದ ಕಾರಣ ಅವರು ನಿರ್ವಹಣೆ ಮಾಡದೆ ಬೇಜವಾಬ್ದಾರಿ ತೋರುತ್ತಿದ್ದಾರೆ’ ಎನ್ನುತ್ತಾರೆ ನಗರಸಭೆ ಮಾಜಿ ಸದಸ್ಯರು.
ನಗರದಲ್ಲಿ ಸರಿಯಾದ ಪಾದಚಾರಿ ಮಾರ್ಗವಿಲ್ಲದೆ ಸಂಚಾರ ತ್ರಾಸದಾಯಕವಾಗಿದೆ. ಯಾವುದೇ ಸ್ಥಳ ಹಾಗೂ ವೃತ್ತಗಳಲ್ಲಿ ನಿಗದಿತ ಟ್ರಾಫಿಕ್ ಪೊಲೀಸರನ್ನು ನಿಯೋಜಿಸದಿರುವುದು ಸಂಚಾರ ಅವ್ಯವಸ್ಥೆಗೆ ಕಾರಣವಾಗಿವೆ. ಸಂಚಾರದ ಗೊಂದಲದಿಂದ ಅಪಘಾತಗಳ ಹೆಚ್ಚಳವಾಗುತ್ತಿದ್ದು, ಪಾದಚಾರಿಗಳಿಗೂ ಸಂಕಷ್ಟ ಎದುರಾಗಿದೆ.
ವಾಹನಗಳ ತಪಾಸಣೆ ಮಾಡಲು ಎಲ್ಲಿ ಬೇಕು ಅಲ್ಲಿ ಪೊಲೀಸರು ನಿಂತಿರುತ್ತಾರೆ. ಅವರ ಅಕ್ಕಪಕ್ಕದಲ್ಲಿರುವ ಪಾದಚಾರಿ ಮಾರ್ಗಗಳನ್ನು ಸರಿಪಡಿಸುವುದಿಲ್ಲ. ಆದರೆ ದಂಡ ವಸೂಲಾತಿಗೆ ನಗರದಲ್ಲಿ ಒಂದೇ ಬಾರಿಗೆ ನಾಲ್ಕೈದು ಕಡೆ ಸಿದ್ಧರಿರುತ್ತಾರೆ ಎಂದು ನಗರ ನಿವಾಸಿಗಳು ದೂರಿದ್ದಾರೆ.
ನಗರಸಭೆ, ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ಸಮನ್ವಯ ಸಾಧಿಸಿ ಸಿಗ್ನಲ್ ಲೈಟ್‌ಗಳ ವೈಫಲ್ಯವನ್ನು ಕೂಡಲೇ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಂಚಾರ ದೀಪಗಳ ಸೂಕ್ತ ನಿರ್ವಹಣೆ ಇಲ್ಲದೆ ಕಾರಣ ಜನ ಅಡ್ಡಾದಿಟ್ಟಿ ಸಂಚಾರ ಮಾಡುತ್ತಾರೆ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಪಾದಾಚಾರಿಗಳಿಗೂ ತೊಂದರೆಯಾಗುತ್ತಿದೆ.ಎಂ.ಡಿ. ರೂಪ, ನಗರವಾಸಿ
ಸಂಚಾರಿ ದೀಪಗಳಿಗೆ ಅಳವಡಿಸಿರುವ ನಿಯಂತ್ರಣ ಫಲಕಗಳು (ಕಂಟ್ರೂಲ್ ಪ್ಯಾನಲ್) ಹಾಳಾಗಿದ್ದು ಇದರ ನಿರ್ವಹಣೆ ಮಾಡುವ ಸಂಸ್ಥೆಗೆ ತಿಳಿಸಲಾಗಿದೆ. ಅದರೆ ಅವರು ನಿರ್ಲಕ್ಷ್ಯದಿಂದ ಅವ್ಯವಸ್ಥೆ ಉಂಟಾಗಿದೆ. ಸದ್ಯದಲ್ಲಿಯೇ ಸರಿಪಡಿಸಲಾಗುವುದು.ವಿಶ್ವೇಶ್ವರ ಬದರಗಡೆ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.