ADVERTISEMENT

ತಿಪಟೂರಿನಲ್ಲಿ ಉದ್ಯೋಗ ಮೇಳ: 74 ಕಂಪನಿ, 800ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:15 IST
Last Updated 1 ಫೆಬ್ರುವರಿ 2026, 7:15 IST
<div class="paragraphs"><p>ತಿಪಟೂರಿನಲ್ಲಿ ನಡೆದ ಉದ್ಯೋಗಮೇಳದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರ ನೀಡಲಾಯಿತು</p></div>

ತಿಪಟೂರಿನಲ್ಲಿ ನಡೆದ ಉದ್ಯೋಗಮೇಳದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರ ನೀಡಲಾಯಿತು

   

ತಿಪಟೂರು: ನಗರದ ಎಸ್‌ವಿಪಿ ವಿದ್ಯಾಸಂಸ್ಥೆ ಆವರಣದಲ್ಲಿ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ನೇತೃತ್ವದಲ್ಲಿ ಶನಿವಾರ ಬೃಹತ್ ಉದ್ಯೋಗ ಮೇಳ ನಡೆಯಿತು.

74 ಕಂಪನಿಗಳು ಭಾಗವಹಿಸಿದ್ದು, 9,495ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುವ ವ್ಯವಸ್ಥೆಯಿತ್ತು. 800ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದು ಸ್ಥಳದಲ್ಲಿಯೇ 396 ಮಂದಿಗೆ ನೇಮಕಾತಿ ಆದೇಶ ಪತ್ರ ನೀಡಲಾಯಿತು.

ADVERTISEMENT

ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ, ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ. ಅದೇ ರೀತಿ ಯುವಕರು ನಿರಂತರ ಪ್ರಯತ್ನ ಮಾಡಿದರೆ ಎಲ್ಲವೂ ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಾವಲಂಬಿಯಾಗಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಕೆ.ಟಿ. ಶಾಂತಕುಮಾರ್ ಮಾತನಾಡಿ, ಕಂಪ್ಯೂಟರ್ ಯುಗದಲ್ಲಿ ಉದ್ಯೋಗಗಳು ಕಡಿಮೆಯಾಗುತ್ತವೆ ಎಂಬ ಭ್ರಮೆ ಇದ್ದರೂ, ವಾಸ್ತವದಲ್ಲಿ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಯುಗದಲ್ಲಿ ಉದ್ಯೋಗಾವಕಾಶ ಇನ್ನಷ್ಟು ಹೆಚ್ಚಾಗಿವೆ. ಇಂದಿನ ದಿನಗಳಲ್ಲಿ ಪ್ರತಿ ಕ್ಷೇತ್ರದಲ್ಲೂ ಎಐ (ಕೃತಕ ಬುದ್ಧಿಮತ್ತೆ) ಪ್ರವೇಶಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೊಬ್ಬರಿಗೆ ಉತ್ತಮ ಬೆಲೆ ದೊರಕುವಂತೆ ಹಲವು ಹೋರಾಟಗಳನ್ನು ನಡೆಸಲಾಗಿದೆ. ಸದ್ಯ ಕೊಬ್ಬರಿಗೆ ಉತ್ತಮ ಬೆಲೆ ಇದ್ದರೂ. ಕಪ್ಪು ಹುಳು ಹಾಗೂ ನುಸಿ ರೋಗದಿಂದ ಇಳುವರಿ ಕಡಿಮೆಯಾಗುತ್ತಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಗಮನಹರಿಸಿ, ಇಳುವರಿ ವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಯುವಜನತೆಗೆ ಉದ್ಯೋಗ ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಂಪನಿಗಳು ರಾಜ್ಯದಿಂದ ಬೇರೆಡೆಗೆ ಸ್ಥಳಾಂತರವಾಗುತ್ತಿದೆ. ಕೆಪಿಎಸ್‌ಸಿ ಮೂಲಕ ನೇಮಕಾತಿ ಪ್ರಕ್ರಿಯೆಗಳು ಸರಿಯಾಗಿ ನಡೆಯುತ್ತಿಲ್ಲ. ಎರಡು ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ ಇದ್ದರೂ ನೇಮಕಾತಿ ನಡೆದಿಲ್ಲ ಎಂದು ದೂರಿದರು.

ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹಕ ರವೀಂದ್ರ ತಗ್ಗಿನಮನಿ ಮಾತನಾಡಿ, ಜೀವನದಲ್ಲಿನ ಸಣ್ಣ ಸಣ್ಣ ವಿಷಯಗಳನ್ನು ನಿರ್ಲಕ್ಷ್ಯ ಮಾಡದೆ ಅವುಗಳಿಗೆ ಸೂಕ್ತ ಗಮನ ನೀಡಿದಾಗ ಮಾತ್ರ ದೊಡ್ಡ ವಿಚಾರಗಳತ್ತ ಗಮನಹರಿಸಲು ಸಾಧ್ಯ. ಸಣ್ಣ ವಿಷಯಗಳಲ್ಲಿ ಶಿಸ್ತು ಮತ್ತು ಜವಾಬ್ದಾರಿ ಬೆಳೆಸಿಕೊಂಡಾಗ ಸಾಧನೆಗೆ ಅನೇಕ ಅವಕಾಶಗಳು ದೊರಕುತ್ತವೆ ಎಂದು ಹೇಳಿದರು.

ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಚ್. ನಿಂಗಪ್ಪ, ಗುಬ್ಬಿ ನಾಗರಾಜು, ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ, ಕಾರ್ಯಧ್ಯಕ್ಷ ಶಿವಸ್ವಾಮಿ ಮತ್ತಿಘಟ್ಟ, ನಗರದ ಅಧ್ಯಕ್ಷ ರಾಜು, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸುದರ್ಶನ್, ಶೋಭಾ ಜಯದೇವ್, ರೇಖಾಅನೂಪ್, ಬಸವರಾಜು, ಸಚಿನ್ ನಡೋಣಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.