ADVERTISEMENT

ತಿಪಟೂರು | ಟೂಡ ಅಧ್ಯಕ್ಷಗಾದಿ ನನೆಗುದಿಗೆ: ಶಾಸಕರ ನಿರ್ಲಕ್ಷ್ಯ ಆರೋಪ

ಅಧ್ಯಕ್ಷರಿಲ್ಲದೆ ದಿಕ್ಕು ತಪ್ಪಿದ ಯೋಜನಾ ಪ್ರಾಧಿಕಾರ: ನಗರದ ಅಭಿವೃದ್ಧಿಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:41 IST
Last Updated 20 ಅಕ್ಟೋಬರ್ 2025, 4:41 IST
ತಿಪಟೂರು ಯೋಜನಾ ಪ್ರಾಧಿಕಾರದ ಕಚೇರಿ
ತಿಪಟೂರು ಯೋಜನಾ ಪ್ರಾಧಿಕಾರದ ಕಚೇರಿ   

ತಿಪಟೂರು: ನಗರವು ವಾಣಿಜ್ಯ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದರೂ, ಅಭಿವೃದ್ಧಿಗೆ ಅಗತ್ಯ ಯೋಜಿತ ವ್ಯವಸ್ಥೆಯ ಕೊರತೆ ಕಳೆದ ಹಲವು ವರ್ಷಗಳಿಂದ ಎದ್ದು ಕಾಣುತ್ತಿದೆ. ಕೆಲವು ವರ್ಷಗಳಿಂದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ಕಾಲಕೂಡಿಲ್ಲ.

2015ರ ಫೆಬ್ರವರಿ 20ರಂದು ಆಸ್ವಿತ್ವಕ್ಕೆ ಬಂದ ಪ್ರಾಧಿಕಾರಕ್ಕೆ ಒಬ್ಬ ಅಧ್ಯಕ್ಷ, ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯ ಹಾಗೂ ಮೂವರು ಸರ್ಕಾರದಿಂದ ನೇಮಿಸಲ್ಪಡುವ ಅಧಿಕಾರೇತರ ಸದಸ್ಯರನ್ನು ನೇಮಿಸಿ ನಗರ ಯೋಜನಾ ಸಹಾಯಕ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯಾಗಿ, ನಗರಸಭೆ ಮುಖ್ಯಾಧಿಕಾರಿಯನ್ನು ಪ್ರತಿನಿಧಿಯಾಗಿ ನಗರಾಭಿವೃದ್ಧಿ ಇಲಾಖೆ ಆದೇಶ ಮಾಡಬೇಕಿರುತ್ತದೆ.

ಆರಂಭದಲ್ಲಿ ಅಂದಿನ ಉಪವಿಭಾಗಧಿಕಾರಿ ಪ್ರಜ್ಞಾ ಅಮ್ಮೆಂಬಳ ಎರಡು ತಿಂಗಳು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ನಂತರ 2015ರಲ್ಲಿ ಸಿ.ಬಿ.ಶಶಿಧರ್ 18 ತಿಂಗಳು ಮತ್ತು 2ನೇ ಅವಧಿಯಲ್ಲಿ 19 ತಿಂಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ತದನಂತರ ಸರ್ಕಾರ ಯಾವ ವ್ಯಕ್ತಿಯನ್ನು ಪದನಾಮಗೊಳಿಸಿದ ಕಾರಣ ಈವರೆಗೆ ಹತ್ತು ಮಂದಿ ಉಪವಿಭಾಗಧಿಕಾರಿಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಪ್ರಸ್ತುತ ಸಪ್ತಶ್ರೀ ಬಿ.ಕೆ. ಆಡಳಿತ ವಹಿಸಿದ್ದಾರೆ.

ADVERTISEMENT

ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು, ವಸತಿ, ಕೈಗಾರಿಕೆ, ವ್ಯಾಪಾರ, ಸಾರಿಗೆ, ಒಳಚರಂಡಿ, ರಸ್ತೆ, ನೀರು, ಮುಂತಾದ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು, ಅನಧಿಕೃತ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ವಸತಿ ಪ್ರದೇಶಗಳನ್ನು ನಿಯಂತ್ರಿಸುವುದು, ಪರಿಸರ ಸ್ನೇಹಿ, ಮನೆ ಕಟ್ಟುವವರಿಗೆ ನಕ್ಷೆ ಅನುಮೋದನೆ, ಯೋಜನಾ ಅನುಮತಿ, ಭೂ ವಿನ್ಯಾಸಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಟೂಡಾದಿಂದ ಸುಗಮವಾಗಲಿವೆ.

ಯೋಜನಾ ಪ್ರದೇಶದ ವ್ಯಾಪ್ತಿಯೊಳಗೆ ತಿಪಟೂರು, ಗೊರಗೊಂಡನಹಳ್ಳಿ, ಮಾರನಗೆರೆ, ಲಿಂಗದಹಳ್ಳಿ, ಮಾದಿಹಳ್ಳಿ, ಕಂಚಾಘಟ್ಟ, ಅಣ್ಣಾಪುರ, ಈಡೇನಹಳ್ಳಿ, ಹಳೇಪಾಳ್ಯ, ಅನಗೊಂಡನಹಳ್ಳಿ, ಬೈರನಾಯಕನಹಳ್ಳಿ, ಚಟ್ನಹಳ್ಳಿ ದೊಡ್ಡಮಾರ್ಪನಹಳ್ಳಿ, ಗೆದ್ದೇಹಳ್ಳಿ, ಹಾವೇನಹಳ್ಳಿ, ಹಿಂಡೆಸ್ಕೆರೆ, ಹೊನ್ನೇನಹಳ್ಳಿ, ಹೊಸಹಳ್ಳಿ, ಹುಚ್ಚಗೊಂಡನಹಳ್ಳಿ, ಹುಲ್ಲುಕಟ್ಟೆ, ಕೊಪ್ಪ, ಮಡೇನೂರು, ಮಿಸೆತೀಮ್ಮನಹಳ್ಳಿ, ರಾಮಶೆಟ್ಟಿಹಳ್ಳಿ, ಶಂಕರನಹಳ್ಳಿ ಗ್ರಾಮಗಳು ಒಳಪಟ್ಟಿವೆ.

ಎಂಟು ವರ್ಷಗಳಿಂದ ಅಧ್ಯಕ್ಷ–ಸದಸ್ಯರ ನೇಮಕಾತಿ ಇಲ್ದೆ ದುರ್ಬಲವಾಗಿದ್ದು, ನಗರ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಮಾಡದೆ ಬಿಟ್ಟಿರುವುದು ವಿಷಾದನೀಯ. ನೇಮಕಾತಿ ಇಲ್ಲದಿರುವುದರಿಂದ ಪ್ರಾಧಿಕಾರದ ಕಾರ್ಯಗಳು ಸ್ಥಗಿತಗೊಂಡಿದ್ದು, ಅಭಿವೃದ್ಧಿ ಯೋಜನೆಗಳು ಕಾಗದಕ್ಕೆ ಸೀಮಿತವಾಗಿವೆ.

ಪ್ರಾಧಿಕಾರಕ್ಕೆ ಯಾವುದೇ ಸರಿಯಾದ ಆಡಳಿತ ಮಂಡಳಿಯ ವ್ಯವಸ್ಥೆಯಿಲ್ಲ. ಕಾಯಂ ಸದಸ್ಯ ಕಾರ್ಯದರ್ಶಿಯನ್ನು ನೇಮಕ ಮಾಡದೆ, ವಾರಕ್ಕೆ ಎರಡು ದಿನ ಮಾತ್ರ ಜಿಲ್ಲಾ ಕೇಂದ್ರದಿಂದ ಯೋಜನಾಧಿಕಾರಿ ಬಂದು ಹೋಗುತ್ತಿದ್ದು, ಆರೇಳು ತಿಂಗಳಿಗೆ ಸಭೆ ಮಾಡುತ್ತಿದ್ದಾರೆ. ಪ್ರಾಧಿಕಾರದ ಕಚೇರಿ ಸಹ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ.

ಸಾರ್ವಜನಿಕರಿಗೆ ಜಮೀನಿನ ನಕ್ಷೆ, ಭೂ ವಿನ್ಯಾಸ ಅನುಮತಿ ಹಾಗೂ ಕಟ್ಟಡ ನಿರ್ಮಾಣ ಸಂಬಂಧಿತ ಕಾರ್ಯಗಳು ವಿಳಂಬವಾಗುತ್ತಿದೆ. ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲದಂತಾಗಿದೆ.

ಜಿಲ್ಲಾ ಪಂಚಾಯಿತಿ, ಎಪಿಎಂಸಿ, ನಗರಸಭೆ, ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯವಾಗುತ್ತಿದ್ದು, ಸ್ಥಳೀಯ ಆಡಳಿತದ ಕನಸು ಗಗನ ಕುಸುಮವಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಟೂಡಾ ಸೇರಿದಂತೆ ಯಾವುದಕ್ಕೂ ನಾಮನಿರ್ದೇಶನ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲಿಲ್ಲ. ಕಾಂಗ್ರೆಸ್‌ನವರೂ ಮಾಡಲ್ಲ. ಶಾಸಕರದ್ದೇ ಪರಮಾಧಿಕಾರ ಎಂಬಂತಾಗಿದೆ. ಗ್ಯಾರಂಟಿ ಗುಲಾಮಗಿರಿಯಲ್ಲಿ ಅಭಿವೃದ್ಧಿ ಮರೀಚಿಕೆಯಾದರೂ ಯಾರು ಧ್ವನಿ ಎತ್ತುತ್ತಿಲ್ಲ.
–ಸಿಂಗ್ರಿ ದತ್ತಪ್ರಸಾದ್, ನಗರಸಭೆ ಮಾಜಿ ಸದಸ್ಯ
ಜಿಲ್ಲಾ ಕೇಂದ್ರವಾಗಬೇಕಿರುವ ನಗರಕ್ಕೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನು ನೇಮಕ ಮಾಡದಿರುವುದು ಅಭಿವೃದ್ಧಿ ದೃಷ್ಟಿಯಲ್ಲಿ ಮತ್ತು ಮಧ್ಯಮ ವರ್ಗದವರ ಮನೆ ನಿರ್ಮಾಣದ ಕನಸಿಗೆ ಹಿನ್ನಡೆಯಾಗಿದೆ. ಚುನಾವಣಾ ಸಂದರ್ಭದಲ್ಲಿ ಜಿಲ್ಲೆ ಮಾಡುತ್ತೇವೆ ಎಂದು ಹೇಳಿ ಮಾತು ತಪ್ಪಿದ್ದು, ನೇಮಕಾತಿಯಾದರೆ ಎಲ್ಲಿ ನಮ್ಮ ಅಧಿಕಾರ ಕೈ ತಪ್ಪುತ್ತದೆ ಎನ್ನುವುದು ಮಾಜಿ ಹಾಗೂ ಹಾಲಿ ಶಾಸಕರ ಮನಸ್ಥಿತಿ.
–ಮುರಳೀಧರ್, ಮಲ್ಲೇನಹಳ್ಳಿ
ತಾಲ್ಲೂಕಿನ ಅಭಿವೃದ್ಧಿಗೆ ಶಾಸಕರು ಎಷ್ಟು ಮುಖ್ಯವೊ, ನಗರದ ಅಭಿವೃದ್ಧಿಗೆ ಪ್ರಾಧಿಕಾರ ಸಹ ಮುಖ್ಯ. ನೇಮಕಾತಿ ವಿಚಾರದಲ್ಲಿ ಆಸಕ್ತಿ ವಹಿಸಿ ನೇಮಕಾತಿ ಮಾಡುವುದು ಸೂಕ್ತ. ಅಭಿವೃದ್ಧಿಯಲ್ಲಿ ಅಧಿಕಾರ ವಿಕೇಂದ್ರೀಕರಣ ಬಹುಮುಖ್ಯ ಪಾತ್ರ ವಹಿಸುತ್ತದೆ.
–ಪ್ರಕಾಶ್ ಹುಣಸೆಘಟ್ಟ, ಜೆಡಿಎಸ್ ಮುಖಂಡ
ನಗರ ವಾಣಿಜ್ಯ ಕೇಂದ್ರವಾಗಿದ್ದು, ಸುತ್ತಲಿನ ನಾಲ್ಕು ತಾಲ್ಲೂಕುಗಳಿಂದ ಸಂಪರ್ವಿದ್ದು, ವೇಗವಾಗಿ ಬೆಳೆಯುತ್ತಿದೆ. ನಗರ ಪ್ರಾಧಿಕಾರವು ವೇಗವಾಗಿ ಕಾರ್ಯನಿರ್ವಹಿಸಬೇಕು. ಆದರೆ ಈವರೆಗೆ ಸ್ವಂತ ಕಚೇರಿ, ಶಾಶ್ವತ ಅಧಿಕಾರಿಗಳು, ಅಧ್ಯಕ್ಷರ ನೇಮಕಾತಿಯಾಗಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರ ಭರಾಟೆಯಲ್ಲಿ ಸಾಗುತ್ತಿದೆ. ನಗರದ ಅಭಿವೃದ್ಧಿ ಕುಂಠಿತವಾಗಿದೆ.
–ವಿಜಯ್ ವಿಕ್ರಮ್, ಕಂಚಾಘಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.