ADVERTISEMENT

ಇಂದು ಶಿರಡಿ ಸಾಯಿ ಬಾಬಾ ಮಂದಿರ 8ನೇ ವಾರ್ಷಿಕೋತ್ಸವ

ಬೆಳಗುಂಬ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್‌ ನಿರ್ಮಿಸಿದ ಮಂದಿರ; ಸಾವಿರಾರು ಭಕ್ತರು ಬರುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಮೇ 2019, 18:25 IST
Last Updated 15 ಮೇ 2019, 18:25 IST
ಶಿರಡಿ ಸಾಯಿಬಾಬಾ ಮಂದಿರದಲ್ಲಿನ ಬಾಬಾ ಮೂರ್ತಿ
ಶಿರಡಿ ಸಾಯಿಬಾಬಾ ಮಂದಿರದಲ್ಲಿನ ಬಾಬಾ ಮೂರ್ತಿ   

ತುಮಕೂರು: ನಗರದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ಬೆಳಗುಂಬ ರಸ್ತೆಯ ಶಿರಡಿ ಸಾಯಿಬಾಬಾ ನಗರದಲ್ಲಿ (ನಗರಾಭಿವೃದ್ಧಿ ಕಚೇರಿ ಮುಂಭಾಗ) ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ ನಿರ್ಮಿಸಿದ ಸಾಯಿಬಾಬಾಬಾ ಮಂದಿರ ಭಕ್ತರ ಆರಾಧನೆಯ ಕೇಂದ್ರವಾಗಿದೆ.

ಪ್ರತಿ ಗುರುವಾರ, ಗುರುಪೂರ್ಣಿಮೆ, ಹಬ್ಬದ ದಿನಗಳಲ್ಲಿ ಸಾವಿರಾರು ಭಕ್ತರು ಈ ಮಂದಿರಕ್ಕೆ ಬಂದು ಶಿರಡಿ ಸಾಯಿಬಾಬಾ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಕೃತಾರ್ಥ ಭಾವನೆ ಹೊಂದುತ್ತಾರೆ. ಮಂದಿರಕ್ಕೆ ಬರುವ ಭಕ್ತರಿಗೆ ಸಕಲ ಅನುಕೂಲತೆ ಕಲ್ಪಿಸಿದೆ.

2007ರ ಜುಲೈನಲ್ಲಿ ಈ ಬಾಬಾ ಮಂದಿರಕ್ಕೆ ಭೂಮಿ ಪೂಜೆ ಮಾಡಲಾಗಿತ್ತು. ಮಂದಿರದ ಕೆಳ ಮಹಡಿಯಲ್ಲಿ ದ್ವಾರಕಾಮಾಯಿಯನ್ನು 2009ರ ಅಕ್ಟೋಬರ್ 31ರಂದು ಉದ್ಘಾಟಿಸಲಾಯಿತು. ಮೊದಲನೇ ಮಹಡಿಯಲ್ಲಿರುವ ಶಿರಡಿ ಸಾಯಿ ಬಾಬಾ ಮಂದಿರವನ್ನು 20011ರ ಮೇ 15ರಂದು ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಉದ್ಘಾಟಿಸಿದರು.

ADVERTISEMENT

ಈಗ ಈ ಶಿರಡಿ ಸಾಯಿ ಬಾಬಾ ಮಂದಿರದ 8ನೇ ವಾರ್ಷಿಕೋತ್ಸವ ಗುರುವಾರ (ಮೇ 16) ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಾರ್ಷಿಕೋತ್ಸವಕ್ಕೆ ಮಂದಿರದ ಟ್ರಸ್ಟ್ ಸಕಲ ಸಿದ್ಧತೆಗಳನ್ನು ಮಾಡಿದ್ದು, ಭಕ್ತರು ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಕಾತುರರಾಗಿದ್ದಾರೆ. ದಾನಿಗಳೆಲ್ಲ ಕೈಲಾದ ದೇಣಿಗೆಯನ್ನು ನೀಡುತ್ತಿದ್ದಾರೆ.

ಮಂದಿರದ ವಿಶೇಷತೆಗಳು: ಪ್ರತಿ ಗುರುವಾರ ಬಾಬಾ ಮಂದಿರದಲ್ಲಿ ಕನಿಷ್ಠ ನಾಲ್ಕು ಸಾವಿರ ಭಕ್ತರು ದರ್ಶನಕ್ಕೆ ಧಾವಿಸುತ್ತಾರೆ. ಮಧ್ಯಾಹ್ನ ಊಟ, ಸಂಜೆ ಪ್ರಸಾದ ವ್ಯವಸ್ಥೆ ಇರುತ್ತದೆ.

ಅಲ್ಲದೇ, ಸಂಜೆ ‘ಜ್ಞಾನ ಬುತ್ತಿ’ ಕಾರ್ಯಕ್ರಮದಡಿ ಚಿಂತಕರು ಆಧಾತ್ಮ, ಆರೋಗ್ಯ, ಧಾರ್ಮಿಕತೆ, ಧ್ಯಾನ, ನೈತಿಕತೆ ಮುಂತಾದ ವಿಷಯಗಳ ಬಗ್ಗೆ ಒಂದು ಗಂಟೆ ಉಪನ್ಯಾಸ ನೀಡುತ್ತಾರೆ. ಗುರುವಾರ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಭಕ್ತರು ಇದರಲ್ಲಿ ಪಾಲ್ಗೊಂಡು ಬಾಬಾ ಧ್ಯಾನದಲ್ಲಿ ಮುಳುಗುತ್ತಾರೆ.

ಆಷಾಢ ಮಾಸದಲ್ಲಿ ನಡೆಯುವ ಗುರುಪೂರ್ಣಿಮೆ ದಿನ ಅಂಗವಿಕಲರು ಮತ್ತು ಅನಾಥರಿಗೆ ಹೊದಿಕೆ ವಿತರಣೆ, ಆರೋಗ್ಯ ತಪಾಸಣೆಯನ್ನು ಟ್ರಸ್ಟ್ ಮಾಡಿಸುತ್ತದೆ. ಅಲ್ಲದೇ, ಉಚಿತ ನೇತ್ರ ತಪಾಸಣೆಯನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದು, ಶಸ್ತ್ರಚಿಕಿತ್ಸೆ ಅಗತ್ಯ ಇರುವವರಿಗೆ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.