ADVERTISEMENT

ಟೊಮೆಟೊ ಬೆಲೆ ಏರುತ್ತಲೇ ಸಾಗಿದೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 7:57 IST
Last Updated 11 ಜುಲೈ 2020, 7:57 IST
ತರಕಾರಿ
ತರಕಾರಿ   

ತುಮಕೂರು: ಟೊಮೆಟೊ ಆವಕ ಕುಸಿದಿದ್ದು, ಬೆಲೆ ಏರಿಕೆಯಾಗುತ್ತಲೇ ಸಾಗಿದೆ. ಕಳೆದ ವಾರ ಕೆ.ಜಿ.ಗೆ ₹30– 35ಕ್ಕೆ ಸಿಗುತ್ತಿದ್ದ ಟೊಮೆಟೊ ಈಗ ₹40ಕ್ಕೆ ಏರಿಕೆಯಾಗಿದೆ.

ಇತ್ತೀಚೆಗೆ ಅಲ್ಲಲ್ಲಿ ಮಳೆಯೂ ಆಗುತ್ತಿದೆ. ಆಷಾಢ ಮಾಸವಾಗಿರುವುದರಿಂದ ಪ್ರಮುಖ ಕಾರ್ಯಕ್ರಮಗಳೂ ನಡೆಯುತ್ತಿಲ್ಲ. ಆದರೂ ಟೊಮೆಟೊ ಬೆಲೆಯಲ್ಲಿ ಏರಿಕೆ ಕಂಡಿದೆ. ಎರಡು ಮೂರು ವಾರಗಳಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆಗೆ ತಕ್ಕಷ್ಟು ಬಾರದೆ ಬೆಲೆಯೂ ಹೆಚ್ಚಾಗುತ್ತಲೇ ಇದೆ. ಆಷಾಢ ಮಾಸ ಮುಗಿದು ಶ್ರಾವಣ ಆರಂಭವಾಗುವ ವೇಳೆಗೆ ಇನ್ನೂ ದುಬಾರಿಯಾಗಬಹುದು ಎಂದು ಹೇಳಲಾಗುತ್ತಿದೆ. ಟೊಮೆಟೊ ಹೊರತುಪಡಿಸಿ ಇತರ ತರಕಾರಿಗಳ ಬೆಲೆ ಇಳಿಕೆಯಾಗಿದೆ.

ಮಾವಿನ ಸೀಜನ್ ಮುಗಿದಿದ್ದು, ನೇರಳೆ ಹಣ್ಣಿನ ಆವಕವೂ ಕಡಿಮೆಯಾಗುತ್ತಾ ಬರುತ್ತಿದೆ. ತಳ್ಳುಗಾಡಿಗಳು, ಬೀದಿಬದಿಯ ಹಣ್ಣಿನ ವ್ಯಾಪಾರವೂ ಕಡಿಮೆಯಾಗಿದೆ. ಹಾಗಾಗಿ ಈಗ ಹೆಚ್ಚಿನ ಜನರು ಹಾಪ್‌ಕಾಮ್ಸ್‌ಗೆ ಬರುತ್ತಾರೆ. ಕೊರೊನಾ ಕಾರಣದಿಂದ ಮುನ್ನೆಚ್ಚರಿಕೆಯಾಗಿ ಸ್ಯಾನಿಟೈಜರ್‌ ಬಳಕೆ ಮಾಡಲಾಗುತ್ತದೆ ಎನ್ನುತ್ತಾರೆ ಹಾಪ್‌ಕಾಮ್ಸ್‌ ಸೇಲ್ಸ್‌ಮ್ಯಾನ್‌ ಟಿ.ಆರ್‌.ನಾಗರಾಜು.

ADVERTISEMENT

ಏರಿಳಿತ ಕಂಡ ತರಕಾರಿ: ಸ್ಥಳೀಯವಾಗಿ ಕ್ಯಾರೆಟ್‌ ಪೂರೈಕೆ ಆಗುತ್ತಿಲ್ಲ. ಊಟಿಯಿಂದ ತುಮಕೂರಿಗೆ ಬರುತ್ತಿದೆ. ನುಗ್ಗೆಕಾಯಿ ಕಳೆದ ವಾರ ಕೆ.ಜಿ.ಗೆ ₹60ಕ್ಕೆ ಮಾರಾಟವಾಗುತ್ತಿತ್ತು. ಈ ವಾರ ₹ 40ಕ್ಕೆ ಇಳಿದಿದೆ. ಆಷಾಢ ಕಳೆದ ನಂತರವಷ್ಟೇ ತರಕಾರಿ ದರದಲ್ಲಿ ಏರಿಕೆಯಾಗಬಹುದು ಎನ್ನುವುದು ತರಕಾರಿ ವ್ಯಾಪಾರಿ ಗಿರೀಶ್‌ ಅಭಿಪ್ರಾಯ.

ಕೋಳಿ ಬೆಲೆ ಸ್ಥಿರ: ಕಳೆದ ವಾರಕ್ಕೆ ಹೋಲಿಸಿದರೆ ಕೋಳಿ ಮಾಂಸದ ಬೆಲೆ ಕಡಿಮೆಯಾಗಿಲ್ಲ. ಕೆ.ಜಿ ₹180ಕ್ಕೆ ಮಾರಾಟವಾಗುತ್ತಿದೆ. ಎಳೆಯ ಕುರಿ ಮಟನ್‌ ಕೆ.ಜಿ ₹600, ಸಾಧಾರಣ ಮಟನ್‌ ₹ 500ಕ್ಕೆ ಮಾರಾಟವಾಗುತ್ತಿದೆ. ಕಳೆದ ವಾರ ₹ 50 ಹೆಚ್ಚಳವಾಗಿತ್ತು ಎನ್ನುತ್ತಾರೆ ನಿಮ್ರಾ ಚಿಕನ್‌, ಮಟನ್‌ ಸ್ಟಾಲ್‌ನ ಶಾಹಿದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.