ADVERTISEMENT

ತುಮಕೂರು: ಟೊಮೆಟೊ, ಈರುಳ್ಳಿ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 7:53 IST
Last Updated 10 ಅಕ್ಟೋಬರ್ 2021, 7:53 IST
ಟೊಮೆಟೊ
ಟೊಮೆಟೊ   

ತುಮಕೂರು: ದುಬಾರಿಯಾಗಿದ್ದ ಕ್ಯಾರೇಟ್, ಬೀನ್ಸ್ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೆ, ಈವರೆಗೆ ಕುಸಿತ ಕಂಡಿದ್ದ ಟೊಮೆಟೊ ಧಾರಣೆ ಒಮ್ಮೆಲೆ ಏರಿಕೆ ಕಂಡಿದೆ. ಇದರ ಜತೆಗೆ ಈರುಳ್ಳಿ ಸಹ ಗಗನದತ್ತ ಮುಖ ಮಾಡಿದೆ.

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಟೊಮೆಟೊ ಕೆ.ಜಿ ₹30ರಿಂದ ₹35ರ ವರೆಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆಯಾಗಿ ಇತರೆ ಮಾರುಕಟ್ಟೆಯಲ್ಲಿ ದರ ಕೆ.ಜಿ ₹50 ದಾಟಿದೆ. ಈರುಳ್ಳಿ ಧಾರಣೆ ಸಹ ಕೆ.ಜಿ ₹30ರಿಂದ ₹35ರ ವರೆಗೆ ಹೆಚ್ಚಳವಾಗಿದೆ. ಇತರೆ ಪ್ರದೇಶಗಳು, ಚಿಲ್ಲರೆ ಅಂಗಡಿಗಳಲ್ಲಿ ಕೆ.ಜಿ ₹50ಕ್ಕೂ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಕೆ.ಜಿ ₹50 ದಾಟಿದ್ದ ಕ್ಯಾರೇಟ್, ದುಬಾರಿಯಾಗಿದ್ದ ಬೀನ್ಸ್ ಬೆಲೆ ಇಳಿಕೆಯತ್ತ ಸಾಗಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಹಸಿರು ಮೆಣಸಿನಕಾಯಿ ಬೆಲೆ ಸ್ವಲ್ಪ ಚೇತರಿಕೆಯತ್ತ ಹೆಜ್ಜೆ ಹಾಕಿದೆ. ಕಳೆದ ಕೆಲ ವಾರಗಳಿಂದ ಹಾಗಲಕಾಯಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಉಳಿದ ತರಕಾರಿಗಳ ಬೆಲೆ ಕೊಂಚ ಇಳಿಕೆಯಾಗಿದೆ.

ADVERTISEMENT

ಮಳೆ ಆರಂಭವಾಗಿದ್ದು, ಮಾರುಕಟ್ಟೆಗೆ ಸೊಪ್ಪು ಬರುವುದು ಕಡಿಮೆಯಾಗಿದ್ದು, ಬೆಲೆ ದುಬಾರಿಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹40–50ಕ್ಕೆ ಮಾರಾಟ ಕಂಡಿದೆ. ಸಬ್ಬಕ್ಕಿ ಸೊಪ್ಪು ಕೆ.ಜಿ ₹40– ₹50, ಪಾಲಕ್ 30ಕ್ಕೆ, ಮೆಂತ್ಯ ಸೊಪ್ಪು ಕೆ.ಜಿ.ಗೆ ₹40– ₹50ಕ್ಕೆ ಹೆಚ್ಚಳವಾಗಿದೆ. ಇಷ್ಟು ದಿನಗಳ ಕಾಲ ಮಳೆ ಇಲ್ಲದೆ ಸೊಪ್ಪು ಬೆಳೆದಿರಲಿಲ್ಲ. ಈಗ ಮಳೆಯಿಂದ ಶೀತ ಹೆಚ್ಚಾಗಿ ಸೊಪ್ಪು ಬೆಳೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮತ್ತಷ್ಟು ದಿನಗಳ ಕಾಲ ಬೆಲೆ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

ಧಾನ್ಯಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬಟಾಣಿ, ಕಡಲೆ ಬೀಜ, ಸಕ್ಕರೆ ಬೆಲೆ ಅಲ್ಪ ಹೆಚ್ಚಳವಾಗಿದ್ದರೆ, ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಧಾರಣೆ ಕೊಂಚ ಕಡಿಮೆಯಾಗಿದೆ. ಅಡುಗೆ ಎಣ್ಣೆ ಬಹುತೇಕ ಸ್ಥಿರತೆ ಕಾಯ್ದುಕೊಂಡಿದ್ದು, ಸನ್‌ಫ್ಲವರ್ ಕೆ.ಜಿ ₹147–150, ಪಾಮಾಯಿಲ್ ಕೆ.ಜಿ ₹123–124ಕ್ಕೆ ಮಾರಾಟವಾಗುತ್ತಿದೆ.

ಸೇಬಿನ ಸೀಸನ್ ಆರಂಭವಾಗಿದ್ದರೂ ಬೆಲೆಯಲ್ಲಿ ಇಳಿಕೆಯಾಗುತ್ತಿಲ್ಲ. ದಾಳಿಂಬೆ ಮತ್ತೆ ದುಬಾರಿಯಾಗಿದ್ದು, ಸಪೋಟ, ಮೂಸಂಬಿ, ಸೀಬೆ, ಪೈನಾಪಲ್ ಹಣ್ಣುಗಳ ಬೆಲೆ ಹೆಚ್ಚಳವಾಗಿದೆ.

ಕೋಳಿ ಬೆಲೆ ಅಲ್ಪ ಇಳಿಕೆ: ಕೋಳಿ ಧಾರಣೆ ಕೆ.ಜಿ.ಗೆ ₹10 ಇಳಿಕೆಯಾಗಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹160ಕ್ಕೆ, ರೆಡಿ ಚಿಕನ್ ₹250ಕ್ಕೆ, ಮೊಟ್ಟೆ ಕೋಳಿ ಕೆ.ಜಿ ₹130ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಮೀನು ದುಬಾರಿ: ಮೀನಿನ ಬೆಲೆ ಏರಿಕೆಯಾಗಿದ್ದು ಬಂಗುಡೆ ಕೆ.ಜಿ 270ಕ್ಕೆ, ಕಪ್ಪು ಮಾಂಜಿ ಕೆ.ಜಿ.ಗೆ ₹120 ಹೆಚ್ಚಳವಾಗಿದ್ದು, ಈಗ ₹510ಕ್ಕೆ, ಬಿಳಿಮಾಂಜಿ ಕೆ.ಜಿ 110 ದುಬಾರಿಯಾಗಿದ್ದು, ₹780ಕ್ಕೆ ಏರಿಕೆಯಾಗಿದೆ. ಅಂಜಲ್ ಮೀನಿನ ಬೆಲೆ ಕಡಿಮೆಯಾಗಿದ್ದು ಕೆ.ಜಿ ₹500ಕ್ಕೆ ಇಳಿದಿದ್ದು, ಬೊಳಿಂಜರ್ (ಸಿಲ್ವರ್) ಕೆ.ಜಿ ₹110 ಕಡಿಮೆಯಾಗಿದ್ದು, ₹250ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.