ADVERTISEMENT

ಟೋಲ್‌ಗೇಟ್‌: ನಗದು ಕೌಂಟರ್‌ನಲ್ಲೇ ವಾಹನ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 21:54 IST
Last Updated 15 ಫೆಬ್ರುವರಿ 2021, 21:54 IST

ಬೆಂಗಳೂರು: ತುಮಕೂರು ರಸ್ತೆಯಲ್ಲಿರುವ ಟೋಲ್‌ಗೇಟ್‌ನ ನಗದು ಕೌಂಟರ್‌ನಲ್ಲಿ ಸೋಮವಾರ ವಾಹನಗಳ ದಟ್ಟಣೆ ಇರುವುದು ಕಂಡುಬಂತು.

ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್‌ ಕಡ್ಡಾಯಗೊಳಿಸುವುದಾಗಿ ಭಾರತೀಯ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಘೋಷಿಸಿದ್ದು, ಫಾಸ್ಟ್ಯಾಗ್‌ ಕೌಂಟರ್‌ಗಳಲ್ಲಿ ಮಾತ್ರ ಬೆಳಿಗ್ಗೆಯಿಂದಲೇ ವಾಹನಗಳ ಸಂಖ್ಯೆ ಕಡಿಮೆ ಇತ್ತು.

ನಗದು ಕೌಂಟರ್‌ನಲ್ಲಿ ಹಣ ಪಾವತಿಸಿ ಮುಂದಕ್ಕೆ ಹೋಗುವವರ ಸಂಖ್ಯೆಯೇ ಹೆಚ್ಚಿತ್ತು. ಕೌಂಟರ್ ಎದುರು ದಟ್ಟಣೆ ಉಂಟಾಗಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು.

ADVERTISEMENT

‘ಕಳೆದ ವರ್ಷದಿಂದಲೇ ಫಾಸ್ಟ್ಯಾಗ್‌ ಅಳವಡಿಕೆ ಬಗ್ಗೆ ಆದೇಶಗಳು ಹೊರಬೀಳುತ್ತಿವೆ. ಇದೇ ಜ. 1ರಿಂದ ಫಾಸ್ಟ್ಯಾಗ್‌ ಕಡ್ಡಾಯವೆಂದು ಎನ್‌ಎಚ್‌ಎಐ ಹೇಳಿತ್ತು. ಅಷ್ಟಾದರೂ ಸಾರ್ವಜನಿಕರು, ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಬಹುತೇಕರು ಇದುವರೆಗೂ ಫಾಸ್ಟ್ಯಾಗ್‌ ಸ್ಟಿಕರ್ ಪಡೆದುಕೊಂಡಿಲ್ಲ. ಪಡೆದುಕೊಂಡವರು, ಬ್ಯಾಂಕ್ ಖಾತೆಯಲ್ಲಿ ಹಣ ನಿರ್ವಹಣೆ ಮಾಡುತ್ತಿಲ್ಲ’ ಎಂದು ಟೋಲ್‌ ಗೇಟ್‌ ಸಿಬ್ಬಂದಿಯೊಬ್ಬರು ಹೇಳಿದರು.

‘ನಗದು ಕೌಂಟರ್‌ನಲ್ಲಿ ಸೋಮವಾರ ತಡರಾತ್ರಿಯವರೆಗೂ ನಿಗದಿತ ಶುಲ್ಕವನ್ನೇ ಪಡೆಯುತ್ತೇವೆ. ಆ ನಂತರ, ಎನ್‌ಎಚ್‌ಎಐ ಆದೇಶದಂತೆ ದುಪ್ಪಟ್ಟು ಶುಲ್ಕ ಸಂಗ್ರಹಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಆಕಸ್ಮಾತ್, ಪುನಃ ಕಡ್ಡಾಯ ದಿನಾಂಕ ವಿಸ್ತರಿಸಿದರೆ ಯಥಾಸ್ಥಿತಿ ಕಾಯ್ದುಕೊಳ್ಳುತ್ತೇವೆ’ ಎಂದೂ ತಿಳಿಸಿದರು.

ಗೊಂದಲ ಸೃಷ್ಟಿ: ಹೊರ ರಾಜ್ಯ ಹಾಗೂ ಹೊರ ನಗರಗಳಿಂದ ಬರುವ ಹಲವು ಚಾಲಕರಿಗೆ ಫಾಸ್ಟ್ಯಾಗ್‌ ಬಗ್ಗೆತಿಳಿವಳಿಕೆ ಇಲ್ಲ. ಇದರಿಂದಲೂ ಟೋಲ್‌ಗೇಟ್‌ನಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ.

‘ಸರಕು ಸಾಗಣೆ ವಾಹನಗಳ ಮಾಲೀಕರ ಹೆಸರಿನಲ್ಲಿ ಫಾಸ್ಟ್ಯಾಗ್ ಇರುತ್ತದೆ. ಆದರೆ, ಅಂಥ ವಾಹನಗಳನ್ನು ಚಾಲಕರು ತರುತ್ತಾರೆ. ಟೋಲ್‌ನಲ್ಲಿ ಹಣ ಪಾವತಿ ಮಾಡುವಾಗ ಏನಾದರೂ ಸಮಸ್ಯೆಯಾದರೆ ಚಾಲಕರು, ಮಾಲೀಕರಿಗೆ ಕರೆ ಮಾಡಿ ಹೇಳುತ್ತಾರೆ. ಅವರು ಹಣ ಪಾವತಿ ಮಾಡುವವರೆಗೂ ವಾಹನ ಟೋಲ್‌ನಲ್ಲೇ ನಿಲ್ಲಬೇಕಾಗುತ್ತದೆ. ಇಂಥ ಹಲವು ಘಟನೆಗಳು ಇಂದು ಸಾಮಾನ್ಯವಾಗಿಬಿಟ್ಟಿವೆ’ ಎಂದೂ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.