ಕೋರ (ತುಮಕೂರು): ಕೋರ ಹೋಬಳಿ ಎಂ.ಗೊಲ್ಲಹಳ್ಳಿ ಗ್ರಾಮದ ಬೆಟ್ಟದ ಮೇಲಿರುವ ಆಂಜನೇಯ ಸ್ವಾಮಿ ದೇವಾಲಯದ ಬಳಿ ಮಹಿಳೆ ಶವ ಪತ್ತೆಯಾಗಿದ್ದು, ನಿಧಿಗಾಗಿ ಬಲಿ ನಡೆದಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆಯೇ ಬೆಟ್ಟದ ಮೇಲಿನ ದೇವಾಲಯದ ಬಳಿ ಮಹಿಳೆ ಕೊಲೆಯಾಗಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ದೇವಾಲಯದ ಒಳಭಾಗದಲ್ಲಿರುವ ಆಂಜನೇಯ ವಿಗ್ರಹದ ಮುಂಭಾಗದಲ್ಲಿ ನಿಧಿಗಾಗಿ ಅಗೆದು ಪೂಜೆ ಸಲ್ಲಿಸಿರುವ ದೃಶ್ಯಗಳಿವೆ. ಹಾಗಾಗಿ ನಿಧಿಗಾಗಿ ಬಲಿ ಕೊಟ್ಟಿರಬಹುದು ಎಂಬ ಶಂಕೆ ಮೂಡಿದೆ.
ಕುರಿಗಾಹಿಗಳು ಕುರಿ ಮೇಯಿಸಲು ಹೋದ ಸಂದರ್ಭದಲ್ಲಿ ದುರ್ವಾಸನೆ ಬಂದಿದ್ದು, ದೇವಾಲಯದ ಅಕ್ಕಪಕ್ಕ ನೋಡಿದಾಗ ಮಹಿಳೆಯ ಕೂದಲು ಕಂಡು ಬಂದಿದೆ. ನಂತರ ಮೃತದೇಹ ಸಂಪೂರ್ಣ ಗುರುತು ಸಿಗದಂತೆ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.
ತಕ್ಷಣ ಕುರಿಗಾಹಿಗಳು ದೇವಾಲಯದ ಬಳಿ ಶವ ಬಿದ್ದಿರುವ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗಾಬರಿಗೊಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಇದು ಕೊಲೆಯೊ ಅಥವಾ ಆತ್ಮಹತ್ಯೆಯೊ ಎಂಬುದು ತಿಳಿಯಲಿದೆ.
ಅನುಮಾನಕ್ಕೆ ಕಾರಣ: ಎಂ.ಗೊಲ್ಲಹಳ್ಳಿ ಬೆಟ್ಟದ ಮೇಲಿರುವ ಆಂಜನೇಯಸ್ವಾಮಿ ದೇವಾಲಯದ ಬಳಿ ಆಗಿಂದಾಗ್ಗೆ ನಿಧಿಗಾಗಿ ಕಿಡಿಗೇಡಿಗಳು ಅಗೆದು ದೇವಾಲಯ ಆವರಣವನ್ನು ಹಾಳು ಮಾಡುತ್ತಿದ್ದರು ಎನ್ನಲಾಗಿದೆ.
ದೇವಾಲಯ ಬೆಟ್ಟದ ಮೇಲಿರುವ ಕಾರಣ ಗ್ರಾಮಸ್ಥರು ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ. ಹುಣ್ಣಿಮೆ, ಅಮಾವಾಸ್ಯೆಗಳಂದು ಪೂಜೆ ನಡೆಯುತ್ತದೆ. ಪೊಲೀಸರ ತನಿಖೆಯಿಂದಷ್ಟೆ ಸತ್ಯ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.