ADVERTISEMENT

ಬಿರುಗಾಳಿಗೆ ನೆಲಕಚ್ಚಿದ ಅಡಿಕೆ, ತೆಂಗು

ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 7:46 IST
Last Updated 1 ಮೇ 2021, 7:46 IST
ಶಿರಾ ತಾಲ್ಲೂಕಿನ ಹೊಸೂರಿನಲ್ಲಿ ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ಮುರಿದು ಬಿದ್ದಿರುವ ಅಡಿಕೆ ಮರಗಳು
ಶಿರಾ ತಾಲ್ಲೂಕಿನ ಹೊಸೂರಿನಲ್ಲಿ ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ಮುರಿದು ಬಿದ್ದಿರುವ ಅಡಿಕೆ ಮರಗಳು   

ಶಿರಾ: ತಾಲ್ಲೂಕಿನ ಗೌಡಗೆರೆ ಹೋಬಳಿಯ ಹೊಸೂರು, ನಾರಾಯಣಪುರ, ದಂಡಿಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ಸಾವಿರಾರು ಮರಗಳು ನೆಲಕಚ್ಚಿವೆ.

ಅಡಿಕೆ, ತೆಂಗು, ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ. ಬಿರುಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದು ವಿದ್ಯುತ್ ಸಂಪರ್ಕವಿಲ್ಲದೆ ಕುಡಿಯುವ ನೀರಿಗೆ ಸಹ ಕಷ್ಟ ಪಡುವಂತಾಗಿದೆ.

ಹೊಸೂರು ಗ್ರಾಮದ ರಾಜಣ್ಣ, ನರಸಿಂಹಮೂರ್ತಿ, ಜುಂಜಣ್ಣ, ನರಸಿಂಹಣ್ಣ, ಹನುಮಂತರಾಜು, ದೇವರಾಜು, ದಂಡಿಕೆರೆ ಗ್ರಾಮದ ಚಿದಾನಂದ, ಹೇರೂರು ಗ್ರಾಮದ ಹನುಮಂತರಾಯಪ್ಪ, ಕೆ.ರಂಗನಹಳ್ಳಿ ಗ್ರಾಮದ ಚಿತ್ತಣ್ಣ, ರಂಗನಾಥ್ ಅವರ ತೋಟಗಳಲ್ಲಿ ಹೆಚ್ಚಿನ ನಷ್ಟ
ಸಂಭವಿಸಿದೆ.

ADVERTISEMENT

ರೈತರ ತೋಟಗಳಲ್ಲಿ 50ರಿಂದ 60 ತೆಂಗು, ಅಡಿಕೆ ಸೇರಿದಂತೆ ಹಲವಾರು ಮರಗಳು ನೆಲಕ್ಕೆ ಉರುಳಿ ಬಿದ್ದಿವೆ. ಬಾಳೆ ತೋಟ ಗಾಳಿಗೆ ಹಾಳಾಗಿವೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ರೈತ ರಾಜಣ್ಣ, ಮಳೆಗಿಂತ ಬಿರುಗಾಳಿಯೇ ಹೆಚ್ಚಾಗಿದೆ. ರೈತರು ಕಷ್ಟ ಪಟ್ಟು ಬೆಳೆಸಿದ ಮರಗಳು ಉರುಳಿ ಬಿದ್ದವು. ರೈತರು ಕೊರೊನಾದಿಂದ ಸಂಕಷ್ಟಕ್ಕೆ ಗುರಿಯಾಗಿರುವ ಸಮಯದಲ್ಲಿ ಈಗ ಬಿರುಗಾಳಿಯಿಂದ ಬೇರೆ ನಷ್ಟ ಸಂಭವಿಸಿದೆ. ಸರ್ಕಾರ ರೈತರ ನೋವಿಗೆ ಸ್ವಂದಿಸುವ ಕೆಲಸ ಮಾಡಿ ಪರಿಹಾರ ನೀಡಬೇಕು’ ಎಂದರು.

ವಿಷಯ ತಿಳಿದು ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು.

ತಂಪೆರೆದ ಮಳೆರಾಯ: ಕೊಡಿಗೇನಹಳ್ಳಿ: ಹೋಬಳಿಯ ಕೆಲ ಗ್ರಾಮಗಳಲ್ಲಿ ಗುರುವಾರ ರಾತ್ರಿ ಗುಡುಗು ಸಹಿತ ಸಾಧಾರಣ ಮಳೆಯಾಯಿತು. ಇದರಿಂದ ಬಿಸಿಲಿನ ಧಗೆಗೆ ಹೈರಾಣಾಗಿದ್ದ ಜನರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೊರೊನಾ ಆರ್ಭಟದ ನಡುವೆ ಗುರುವಾರ ರಾತ್ರಿ ಗಾಳಿ, ಗುಡುಗು-ಮಿಂಚಿನ ನಡುವೆ ಕೆಲಕಾಲ ಸುರಿದ ಭರಣಿ ಮಳೆ ರೈತರ ಮೊಗದಲ್ಲಿ ಮಂದಹಾಸ ಮಿನುಗುವಂತೆ ಮಾಡಿದೆ. ಕೊಡಿಗೇನಹಳ್ಳಿ ಮಳೆ ಮಾಪನ ಕೇಂದ್ರದಲ್ಲಿ 13.5 ಮಿ.ಮೀ ಮಳೆಯಾಗಿರುವ ಬಗ್ಗೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.