ADVERTISEMENT

ಕೊಡಿಗೇನಹಳ್ಳಿ: ಗಡಿ ಭಾಗದ ಶಾಲೆಗೆ ಹೈಟೆಕ್‌ ಸ್ಪರ್ಶ

ಪೋಲೇನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಶಾಲೆಗೆ ದಾನಿಗಳ ನೆರವಿನಿಂದ ಸೌಕರ್ಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2023, 8:24 IST
Last Updated 27 ಆಗಸ್ಟ್ 2023, 8:24 IST
ಕೊಡಿಗೇನಹಳ್ಳಿ ಹೋಬಳಿಯ ಪೋಲೇನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಲಿ, ಕಲಿ
ಕೊಡಿಗೇನಹಳ್ಳಿ ಹೋಬಳಿಯ ಪೋಲೇನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಲಿ, ಕಲಿ   

ಗಂಗಾಧರ್ ವಿ ರೆಡ್ಡಿಹಳ್ಳಿ

ಕೊಡಿಗೇನಹಳ್ಳಿ: ಹೋಬಳಿಯ ಪೋಲೇನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಗಡಿ ಭಾಗದಲ್ಲಿದ್ದರೂ, ಮಕ್ಕಳ ಸಂಖ್ಯೆಗೇನೂ ಕೊರತೆಯಿಲ್ಲ. ದಾನಿಗಳ ನೆರವಿನಿಂದ ಮಖ್ಯಶಿಕ್ಷಕ ಈ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ.

1936ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಸುಮಾರು 100 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದ ಈ ಶಾಲೆಗೆ ಮುಖ್ಯಶಿಕ್ಷಕ ನರಸಿಂಹಮೂರ್ತಿ ದಾನಿಗಳ ನೆರವಿನಿಂದ ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ.

ADVERTISEMENT

ಶಾಲೆಯನ್ನು ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸುವುದರ ಜೊತೆಗೆ ಮಕ್ಕಳನ್ನು ಆಕರ್ಷಿಸಲು ಸುಂದರ ವಾತಾವರಣ ಅಗತ್ಯ. ಅದಕ್ಕೆ ಸರ್ಕಾರಿ ಅನುದಾನಕ್ಕೆ ಕಾಯದೆ ದಾನಿಗಳ ಮನವೊಲಿಸಿ ಅಭಿವೃದ್ಧಿಪಡಿಸಲು ಮುಂದಾದೆ. ಬೆಂಗಳೂರಿನ ವಿನೋದ್, ಇಂಡಿಯಾ ಸುಧಾರ್, ಆಪ್ಟಿಯನ್, ವಿಯರ್ ಸಂಸ್ಥೆಗಳ ಸಹಕಾರದೊಂದಿಗೆ ಕೊಠಡಿಗೆ ಬಣ್ಣ, ಮಕ್ಕಳಿಗೆ ಬ್ಯಾಗ್ ಸೇರಿದಂತೆ ಕಲಿಕಾ ಸಾಮಗ್ರಿ, ಕೊಠಡಿ, ಶಾಲೆ ಗೇಟ್‌ ದುರಸ್ತಿ ಹಾಗೂ ಆಟಿಕೆಗಳನ್ನು ಅಳವಡಿಸಿದ್ದಾರೆ.

ವಿಯರ್ ಸಂಸ್ಥೆಯಿಂದ ಪ್ರತ್ಯೇಕ ಶೌಚಾಲಯ, ಹ್ಯಾಂಡ್‌ವಾಶ್, ಕೊಠಡಿಗಳಿಗೆ ಸುಣ್ಣ, ಬಣ್ಣ, ನೀರು ಸಂಗ್ರಹ ಡ್ರಮ್‌, ವಾಟರ್ ಫಿಲ್ಟರ್, ನೀರೆತ್ತುವ ಮೋಟರ್, ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ನಡೆಸಲು ವ್ಯವಸ್ಥೆ ಮಾಡಿದ್ದಾರೆ. ಇತರೆ ದಾನಿಗಳಿಂದ ಶಾಲೆಗೆ ಅಗತ್ಯವಾದ ಎಜುಸ್ಯಾಟ್, ಪ್ರಾಜೆಕ್ಟರ್, ಫ್ಯಾನ್‌, ಕಲಿಕಾ ಹಾಗೂ ಅಗತ್ಯ ಸೌಕರ್ಯ ಒದಗಿಸಿದ್ದಾರೆ.

ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಕುರ್ಚಿ, ಕಂಪ್ಯೂಟರ್, ಟೇಬಲ್‌, ಮಧುಗಿರಿ ಚಿರೆಕ್ ಪಬ್ಲಿಕ್ ಶಾಲೆಯಿಂದ ಡೆಸ್ಕ್, ಆರ್.ಕೆ. ಪೌಂಡೇಷನ್‌ನಿಂದ ಮಕ್ಕಳಿಗೆ ಸ್ವೆಟರ್, ಆಟಿಕೆ ಸಾಮಗ್ರಿ ಪಡೆಯಲಾಗಿದೆ ಎಂದು ಮುಖ್ಯ ಶಿಕ್ಷಕ ಎಂ.ಎಸ್. ನರಸಿಂಹಮೂರ್ತಿ ತಿಳಿಸಿದರು.

ಆಟದ ಮೈದಾನದಲ್ಲಿನ ಆಟಿಕೆಗಳು
ಎಂ.ಎಸ್. ನರಸಿಂಹಮೂರ್ತಿ
 ಲಕ್ಷ್ಮಣ್
ಅನುರಾಧ
ಬಾಲಾಜಿ
ಸರ್ಕಾರಿ ಶಾಲೆಗಳಿಗೆ ನನ್ನಿಂದ ಆಗಬಹುದಾದ ಸೇವೆಯನ್ನು ಯಾವುದೇ ಸ್ವಾರ್ಥವಿಲ್ಲದೆ ಮಾಡಬೇಕು ಎನ್ನುವುದು ನನ್ನ ಬಯಕೆ.
ಎಂ.ಎಸ್. ನರಸಿಂಹಮೂರ್ತಿ ಮುಖ್ಯ ಶಿಕ್ಷಕ
ಶಾಲೆಯ ಮುಖ್ಯಶಿಕ್ಷಕ ಹಾಗೂ ಸಹ ಶಿಕ್ಷಕರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶಾಲೆ ಕಾಂಪೌಂಡ್ ಕೆಲವೆಡೆ ಹಾಳಾಗಿದ್ದು ಪಂಚಾಯಿತಿ ಅನುದಾನದಲ್ಲಿ ಅದನ್ನು ದುರಸ್ತಿ ಮಾಡಿಸಲಾಗುವುದು.
ಲಕ್ಷ್ಮಣ್ ಗ್ರಾಮ ಪಂಚಾಯಿತಿ ಸದಸ್ಯ
ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಎಲ್ಲ ರೀತಿಯ ಅನುಕೂಲವಿದೆ. ಇಂತಹ ಸೌಲಭ್ಯ ಬಿಟ್ಟು ಖಾಸಗಿ ಶಾಲೆಗೆ ಹೋಗಿ ಪೋಷಕರಿಗೆ ಆರ್ಥಿಕ ಹೊರೆ ಏಕೆ ಹೊರಿಸಲಿ
ಅನುರಾಧ 6ನೇ ತರಗತಿ ವಿದ್ಯಾರ್ಥಿ
ವಿದ್ಯಾರ್ಥಿಗಳಿಗೆ ಓದುವುದಕ್ಕೆ ಖಾಸಗಿ ಶಾಲೆಯಾದರೇನು ಸರ್ಕಾರಿ ಶಾಲೆಯಾದರೇನು? ವಿದ್ಯಾಭ್ಯಾಸದ ಅವಧಿಯಲ್ಲಿ ಶ್ರದ್ಧೆ ಜೊತೆಗೆ ಕಠಿಣ ಅಭ್ಯಾಸವಿದ್ದರೆ ಸಾಧನೆ ಸಾದ್ಯ.
ಬಾಲಾಜಿ. 6ನೇ ತರಗತಿ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.