ADVERTISEMENT

ತುಮಕೂರು| ಸದನದಲ್ಲಿ ಗೂಂಡಾಗಿರಿ ವರ್ತನೆ: ಶಾಸಕ ಬಿ.ಸುರೇಶ್‌ಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 6:46 IST
Last Updated 23 ಜನವರಿ 2026, 6:46 IST
ಬಿ.ಸುರೇಶ್‌ಗೌಡ
ಬಿ.ಸುರೇಶ್‌ಗೌಡ   

ತುಮಕೂರು: ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರು ಗೂಂಡಾಗಿರಿ ವರ್ತನೆ ತೋರಿಸಿದ್ದಾರೆ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಆರೋಪಿಸಿದ್ದಾರೆ.

ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ಹೊರಗೆ ಹೋಗುವಾಗ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ, ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್‌ ಘೇರಾವ್ ಹಾಕಿರುವುದು ಅಸಂವಿಧಾನಿಕ ನಡೆ. ಸದನದ ನಿಯಮಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಪ್ರಜಾಪ್ರಭುತ್ವದ ಆಶಯ, ಸಿದ್ಧಾಂತಗಳಲ್ಲಿ ಗೌರವ ಇಲ್ಲ ಎಂಬುದನ್ನು ಕಾಂಗ್ರೆಸ್‌ ಪಕ್ಷ ಹಾಗೂ ಶಾಸಕರು ವಿಧಾನಸಭೆಯಲ್ಲಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರ ಸರ್ಕಾರದ ಜತೆಗೆ ಸಂಘರ್ಷಕ್ಕೆ ಇಳಿದಿದೆ. ಕೇಂದ್ರ ತಂದಿರುವ ಜಿ ರಾಮ್‌ ಜಿ ಕಾನೂನಿಗೆ ರಾಜ್ಯದ ವಿರೋಧ ಇದ್ದರೆ ಅದನ್ನು ಚರ್ಚಿಸಲು ಸಾಕಷ್ಟು ವೇದಿಕೆಗಳು ಇವೆ. ಜಂಟಿ ಅಧಿವೇಶನ ಕರೆದು, ಅದನ್ನು ರಾಜ್ಯಪಾಲರ ಬಾಯಲ್ಲಿ ಹೇಳಿಸುವುದು ಸರಿಯಲ್ಲ. ಆಡಳಿತ ವೈಫಲ್ಯ, ಮುಖ್ಯಮಂತ್ರಿ ಖುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ನಡೆದಿರುವ ಕಚ್ಚಾಟದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ದೂರಿದ್ದಾರೆ.

ADVERTISEMENT

ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ರಾಜಭವನವನ್ನು ದುರುಪಯೋಗ ಮಾಡಿಕೊಂಡು ಅನೇಕ ರಾಜ್ಯ ಸರ್ಕಾರಗಳನ್ನು ವಜಾ ಮಾಡಿದ ಕುಖ್ಯಾತಿ ಹೊಂದಿದೆ. ಇಂದಿರಾ ಗಾಂಧಿ ಒಬ್ಬರೇ 49 ಸಾರಿ ರಾಜ್ಯ ಸರ್ಕಾರಗಳನ್ನು ವಜಾ ಮಾಡಿಸಿದ್ದರು. ಅವರೇ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನೂ ಹೇರಿದ್ದರು. ಇಂತಹವರು ನಮಗೆ ಸಂವಿಧಾನದ ಪಾಠ ಹೇಳುತ್ತಿರುವುದು ಭೂತದ ಬಾಯಿಯಲ್ಲಿ ಭಗವದ್ಗೀತೆ ಬೋಧಿಸಿದಂತಾಗಿದೆ ಎಂದು ಹೇಳಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಪಾಲರಾಗಿದ್ದ ಎಚ್‌.ಆರ್‌.ಭಾರದ್ವಾಜ್‌ ಜಂಟಿ ಅಧಿವೇಶನದಲ್ಲಿ ಎರಡೇ ಸಾಲು ಓದಿ ಹೋಗಿದ್ದರು. ಆಗ ಸಂವಿಧಾನದ ರಕ್ಷಣೆಯಾಗಿತ್ತೇ? ಆಗ ಕಾಂಗ್ರೆಸ್‌ ಪಕ್ಷದವರು ನಿದ್ದೆ ಮಾಡುತ್ತಿದ್ದರಾ? ಥಾವರಚಂದ್ ಗೆಹಲೋತ್ ಅವರು ಕೇಂದ್ರದ ಜತೆಗೆ ಸಂಘರ್ಷ ಆಗಬಾರದು ಎಂಬ ಕಾರಣಕ್ಕೆ ಪ್ರಬುದ್ಧವಾಗಿ ನಡೆದುಕೊಂಡಿದ್ದಾರೆ ಎಂದಿದ್ದಾರೆ.

ಅಸಂವಿಧಾನಿಕ: ಸಿಪಿಎಂ ಟೀಕೆ

ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲು ನಿರಾಕರಿಸಿರುವ ರಾಜ್ಯಪಾಲರ ನಡೆಯು ಅಸಂವಿಧಾನಿಕ. ತಮ್ಮದೇ ಒಂದು ನಿಮಿಷದ ಭಾಷಣ ಓದಿರುವುದು ಸರ್ವಾಧಿಕಾರಿ ನಡೆ ಎಂದು ಸಿಪಿಐಎಂ ಟೀಕಿಸಿದೆ. ರಾಜ್ಯ ಸರ್ಕಾರ ಪ್ರತಿನಿಧಿಸುವ ರಾಜ್ಯಪಾಲರು ಪ್ರತಿ ವರ್ಷದ ಮೊದಲ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಮಂತ್ರಿಮಂಡಲ ಸಿದ್ಧಪಡಿಸಿದ ಭಾಷಣ ಓದಬೇಕಿದೆ. ರಾಜ್ಯಪಾಲರು ಸಂವಿಧಾನದ ವಿಧಿಯಂತೆ ನಡೆದುಕೊಳ್ಳದಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಆರೋಪಿಸಿದ್ದಾರೆ.

ರಾಜ್ಯಪಾಲರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಾರೆಯೇ ಹೊರತು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಜನಪ್ರತಿನಿಧಿಯನ್ನಲ್ಲ. ಅವರು ಕೇಂದ್ರದಿಂದ ನೇಮಕಗೊಂಡವರು. ಹಾಗಾಗಿ ಜಂಟಿ ಸದನದಲ್ಲಿ ಮಂತ್ರಿಮಂಡಲ ಸಿದ್ಧಪಡಿಸಿದ ಭಾಷಣವನ್ನು ಓದುವುದು ಅವರ ಕರ್ತವ್ಯವಾಗಿದೆ. ಭಾಷಣವನ್ನು ಮನಬಂದಂತೆ ತಿದ್ದಪಡಿ ಮಾಡುವುದು ಅದಕ್ಕೆ ವ್ಯತಿರಿಕ್ತವಾಗಿ ತಮ್ಮದೇ ಭಾಷಣ ಓದಲು ಅವಕಾಶವಿಲ್ಲ. ಅದು ರಾಜ್ಯಪಾಲರ ವೈಯಕ್ತಿಕ ಭಾಷಣವಲ್ಲ. ಕೆಲವು ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವಲ್ಲಿ ನಿರತರಾಗಿದ್ದಾರೆ. ಅದಕ್ಕಾಗಿ ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿದೆ. ಇದೇ ವೇಳೆ ವಿರೋಧ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯು ರಾಜ್ಯಪಾಲರ ನಡೆಯನ್ನು ಸ್ವಾಗತಿಸಿದೆ. ಇದು ಸಂವಿಧಾನದ ಬಗ್ಗೆ ಅವರಿಗೆ ಗೌರವ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.