ADVERTISEMENT

ಬಂಜಾರ ಭವನ ಉದ್ಘಾಟನೆ; ತಾಂಡಾ ಅಭಿವೃದ್ಧಿಗೆ ನೂರಾರು ಕೋಟಿ ವೆಚ್ಚ: ಸಚಿವ ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:55 IST
Last Updated 14 ಡಿಸೆಂಬರ್ 2025, 6:55 IST
ತುಮಕೂರಿನಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಬಂಜಾರ ಭವನ ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಚಿತ್ರದುರ್ಗ ಬಂಜಾರ ಗುರಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಿವಸಿದ್ಧೇಶ್ವರ ಸ್ವಾಮೀಜಿ,‌ ಜಿ.ಪಂ ಸಿಇಒ ಜಿ.ಪ್ರಭು ಇತರರು ಹಾಜರಿದ್ದರು
ತುಮಕೂರಿನಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಬಂಜಾರ ಭವನ ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಚಿತ್ರದುರ್ಗ ಬಂಜಾರ ಗುರಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಿವಸಿದ್ಧೇಶ್ವರ ಸ್ವಾಮೀಜಿ,‌ ಜಿ.ಪಂ ಸಿಇಒ ಜಿ.ಪ್ರಭು ಇತರರು ಹಾಜರಿದ್ದರು   

ತುಮಕೂರು: ‘ಅಸಮಾನತೆ ತೊಡೆದು ಹಾಕಿ, ಸಮ ಸಮಾಜ ನಿರ್ಮಿಸುವುದು ಸರ್ಕಾರದ ಉದ್ದೇಶ. ಇದಕ್ಕೆ ಪೂರಕವಾಗಿ ಕಳೆದ 2 ವರ್ಷದಲ್ಲಿ ತಾಂಡಾಗಳ ಅಭಿವೃದ್ಧಿಗೆ ನೂರಾರು ಕೋಟಿ ವ್ಯಯಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ನಗರದಲ್ಲಿ ಶನಿವಾರ ತಾಂಡಾ ಅಭಿವೃದ್ಧಿ ನಿಗಮ, ಜಿಲ್ಲಾ ಬಂಜಾರ ಸೇವಾಲಾಲ್‌ ಸೇವಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಂಜಾರ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

₹3.40 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲಾಗಿದೆ. ತಾಂಡಾಗಳ ಮೂಲಭೂತ ಸೌಲಭ್ಯಕ್ಕೆ ₹50 ಕೋಟಿ ವೆಚ್ಚ ಮಾಡಲಾಗಿದೆ. 500ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ. 10 ಸಾವಿರ ಲಂಬಾಣಿ ಯುವಕ, ಯುವತಿಯರಿಗೆ ಕೌಶಲ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ‘ಜಾತಿ ವ್ಯವಸ್ಥೆ ಮನುಷ್ಯನನ್ನು ಕುಗ್ಗಿಸಿದೆ. ಜಾತಿ, ಉಪಜಾತಿ ಎಂದು ಒಡೆದು ಚೂರಾದರೆ ಅವಕಾಶ ದೂರವಾಗುತ್ತದೆ. ಜಾತೀಯತೆ ಇಲ್ಲದಿದ್ದರೆ ಭಾರತ ಮತ್ತಷ್ಟು ಶಕ್ತಿಯುತವಾಗುತ್ತಿತ್ತು. ತಳ ಸಮುದಾಯವನ್ನು ಸಮಾಜದ ಮುನ್ನೆಲೆಗೆ ತರುವ ಉದ್ದೇಶದಿಂದ ಸಂವಿಧಾನದಲ್ಲಿ ಕಾನೂನಾತ್ಮಕವಾಗಿ ಶಕ್ತಿ ಕೊಡಲಾಯಿತು. ದುರ್ದೈವದ ಸಂಗತಿ ಇಂದಿಗೂ ಜಾತಿ ವ್ಯವಸ್ಥೆ ಜೀವಂತವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ, ‘ರಾಜ್ಯದ 14 ಜಿಲ್ಲೆಗಳಲ್ಲಿ ಬಂಜಾರ ಭವನ ನಿರ್ಮಿಸಲಾಗಿದೆ. ಅನೇಕ ಜನಪರ ಯೋಜನೆ ರೂಪಿಸಲಾಗಿದೆ. ಸಮುದಾಯದ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲಾಗಿದೆ. ಊರು ಬಿಟ್ಟು ವಲಸೆ ಹೋಗದೆ‌, ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸಮಾಜದ ಜನರು ಒಂದಾಗಿರಬೇಕು’ ಎಂದು ಸಲಹೆ ಮಾಡಿದರು.

ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ,‌ ಚಿತ್ರದುರ್ಗ ಬಂಜಾರ ಗುರಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್, ಬಂಜಾರ‌ ಸಮುದಾಯದ ಮುಖಂಡರಾದ ಡಿ.ನಾರಾಯಣ್ ನಾಯಕ್‌, ಎಚ್.ಬಿ.ಸಿದ್ಯಾನಾಯಕ್, ಜಿ.ರಘುನಾಥ್, ಕುಮಾರ್‌ ನಾಯಕ್, ದೇನಾ ನಾಯಕ್, ಲೋಹಿತಾ ಬಾಯಿ, ಇಂದಿರಾ ಬಾಯಿ ಮೊದಲಾದವರು ಪಾಲ್ಗೊಂಡಿದ್ದರು.

ಬಂಜಾರ ಭವನ ಉದ್ಘಾಟನಾ ಸಮಾರಂಭದಲ್ಲಿ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು
ಸರ್ಕಾರ ಬಂಜಾರರು ಸೇರಿದಂತೆ ಎಲ್ಲ ಸಮುದಾಯಕ್ಕೆ ಹಾಸ್ಟೆಲ್‌ ನಿರ್ಮಿಸಬೇಕು. ಮಕ್ಕಳಿಗೆ ಶೈಕ್ಷಣಿಕವಾಗಿ ಶಕ್ತಿ ನೀಡಬೇಕು. ಸಮುದಾಯದ ಜನ ಹೆಚ್ಚಿರುವ ಕ್ಷೇತ್ರಕ್ಕೆ ಅನುದಾನ ನೀಡಬೇಕು.
– ಸಿ.ಬಿ.ಸುರೇಶ್‌ ಬಾಬು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಂಡಾದಲ್ಲಿ ನೀರಿಗೆ ಹಾಹಾಕಾರ

ರಾಜ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ತಾಂಡಾಗಳಿವೆ. ಇಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಮಹಿಳೆಯರು ಐದಾರು ಕಿ.ಮೀ ನಡೆದುಕೊಂಡು ಹೋಗಿ ನೀರು ತರಬೇಕಾದ ಪರಿಸ್ಥಿತಿ ಇದೆ. ರಸ್ತೆ ಚರಂಡಿ ಸಂಪರ್ಕ ಕಲ್ಪಿಸಿಲ್ಲ. ತಾಂಡಾಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಅಗತ್ಯ ಹಣಕಾಸಿನ ನೆರವು ಒದಗಿಸಬೇಕು.
– ಜಯದೇವ ನಾಯಕ್, ಅಧ್ಯಕ್ಷ ತಾಂಡಾ ಅಭಿವೃದ್ಧಿ ನಿಗಮ

ಪರಮೇಶ್ವರ 2013ರಲ್ಲಿ ಸಿ.ಎಂ ಆಗಬೇಕಿತ್ತು: ಮಹದೇವಪ್ಪ

‘ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಮುಖಂಡರು ಈಗ ಒತ್ತಾಯಿಸುತ್ತಿದ್ದಾರೆ. 2013ರಲ್ಲೇ ಸಿ.ಎಂ ಆಗಬೇಕಿತ್ತು. ಆಗ ಸುಮ್ಮನಿದ್ದು ಈಗ ಕೇಳುತ್ತಿದ್ದೀರಿ’ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಸಚಿವ ಪರಮೇಶ್ವರ ವೇದಿಕೆ ಬರುತ್ತಿದ್ದಂತೆ ‘ಮುಂದಿನ ಮುಖ್ಯಮಂತ್ರಿ ಪರಮೇಶ್ವರಗೆ ಜೈ’ ಎಂದು ಮುಖಂಡರು ಘೋಷಣೆ ಕೂಗಿದರು.

ಮಹದೇವಪ್ಪ ಮಾತನಾಡುವಾಗ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಮುಖಂಡರು ಪರಮೇಶ್ವರ ಪರ ಘೋಷಣೆ ಕೂಗಿದರು. ‘ಲಂಬಾಣಿಗರ ಬೇಡಿಕೆಗೆ ಜಯವಾಗಲಿ’ ಎಂದು ಮಹದೇವಪ್ಪ ಆಶಿಸಿದರು. ‘ದಿನ ಬೆಳಗಾದರೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುವವರು ಹೆಚ್ಚಾಗಿದ್ದಾರೆ. ಈ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ’ ಎಂದು ಪರಮೇಶ್ವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.