ADVERTISEMENT

ತುಮಕೂರು | ಬ್ಯಾಂಕ್ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:40 IST
Last Updated 28 ಜನವರಿ 2026, 6:40 IST
ತುಮಕೂರಿನ ಎಸ್‌ಬಿಐ ಎದುರು ಮಂಗಳವಾರ ವಿವಿಧ ಬ್ಯಾಂಕ್‌ಗಳ ನೌಕರರು ಪ್ರತಿಭಟನೆ ನಡೆಸಿದರು
ತುಮಕೂರಿನ ಎಸ್‌ಬಿಐ ಎದುರು ಮಂಗಳವಾರ ವಿವಿಧ ಬ್ಯಾಂಕ್‌ಗಳ ನೌಕರರು ಪ್ರತಿಭಟನೆ ನಡೆಸಿದರು   

ತುಮಕೂರು: ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರುವಂತೆ ಆಗ್ರಹಿಸಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ನೇತೃತ್ವದಲ್ಲಿ ಬ್ಯಾಂಕ್ ನೌಕರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ವಾರಕ್ಕೆ ಐದು ದಿನಗಳು ಕೆಲಸದ ಸಮಯವನ್ನು ನಿಗದಿಪಡಿಸುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದು, ಈವರೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಚರ್ಚ್ ವೃತ್ತದಲ್ಲಿರುವ ಎಸ್‌ಬಿಐ ಬ್ಯಾಂಕ್ ಎದುರು ವಿವಿಧ ಬ್ಯಾಂಕ್ ಅಧಿಕಾರಿಗಳು, ನೌಕರರು, ಸಿಬ್ಬಂದಿ ಪ್ರತಿಭಟನೆ ನಡೆಸಿ, ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವಂತೆ ಒತ್ತಾಯಿಸಿದರು.

ADVERTISEMENT

ಎಲ್ಲ ಶನಿವಾರಗಳನ್ನು ರಜಾ ದಿನಗಳನ್ನಾಗಿ ಘೋಷಿಸಬೇಕು ಎಂಬ ನಿರ್ಧಾರಕ್ಕೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ (ಐಬಿಎ) ಹಾಗೂ ಯುಎಫ್‌ಬಿಯು ನಡುವೆ 2024ರ ಮಾರ್ಚ್‌ನಲ್ಲಿ ನಡೆದ ವೇತನ ಪರಿಷ್ಕರಣೆ ಸಂದರ್ಭದಲ್ಲಿ ಒಪ್ಪಿಗೆ ನೀಡಲಾಗಿತ್ತು. ಆದರೆ ಸರ್ಕಾರ ನಮ್ಮ ಬೇಡಿಕೆಗೆ ಈವರೆಗೂ ಸ್ಪಂದಿಸಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕೆಲಸದ ದಿನಗಳನ್ನು ವಾರಕ್ಕೆ 5 ದಿನಗಳಿಗೆ ಇಳಿಸುವಂತೆ 2015ರಿಂದಲೂ ಒತ್ತಾಯಿಸುತ್ತಲೇ ಬರಲಾಗಿದೆ. 2018ರಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರ ಮಾತ್ರ ರಜೆ ನೀಡಲಾಯಿತು. 2024ರಲ್ಲಿ ವೇತನ ಪರಿಷ್ಕರಣೆ ಸಮಯದಲ್ಲಿ ಉಳಿದ ಎರಡು ಶನಿವಾರಗಳಂದು ರಜೆ ನೀಡುವಂತೆ ಒತ್ತಾಯಿಸಿದ್ದು, ಅದಕ್ಕೆ ಒಪ್ಪಿಗೆ ನೀಡಲಾಗಿತ್ತು. ಆದರೆ ಈವರೆಗೂ ಜಾರಿಗೆ ತಂದಿಲ್ಲ ಎಂದು ಯುಎಫ್‍ಬಿಯು ಸಂಚಾಲಕ ಕೆ.ಎನ್.ವಾದಿರಾಜ ದೂರಿದರು.

ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್, ಎಲ್‌ಐಸಿ, ಜಿಐಸಿ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ ಬ್ಯಾಂಕ್‌ಗಳಲ್ಲಿ ಮಾತ್ರ ಇದು ಜಾರಿಯಾಗಿಲ್ಲ. ಅಗತ್ಯ ಸಿಬ್ಬಂದಿಗಳ ನೇಮಕವಾಗದೆ ಕೆಲಸ ನಿರ್ವಹಣೆ ಕಷ್ಟಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗಿದೆ. ಒತ್ತಡದಿಂದಾಗಿ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ವಿವಿಧ ಬ್ಯಾಂಕ್ ಸಂಘಟನೆಗಳ ಪ್ರಮುಖರಾದ ಶಂಕರಪ್ಪ, ಸರ್ವಮಂಗಳ ರವಿ, ಸತೀಶ್ ರಾಮ್, ನಾರಾಯಣ್, ಅಜಯ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.