ADVERTISEMENT

ತುಮಕೂರು: ಗಾರೆ ಕೆಲಸಗಾರರು ಸೈಬರ್‌ ಬಲೆಗೆ; ₹10 ಲಕ್ಷ ಕಳೆದುಕೊಂಡ ಕೆಲಸಗಾರರು

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 15:34 IST
Last Updated 25 ಜನವರಿ 2025, 15:34 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ತುಮಕೂರು: ಬದುಕು ಕಟ್ಟಿಕೊಳ್ಳುವ ಸಲುವಾಗಿ ಕೆಲಸ ಅರಸಿ ಹುಟ್ಟೂರು ಬಿಟ್ಟು ನಗರ ಪ್ರದೇಶಗಳಿಗೆ ಗುಳೆ ಬಂದ ಯುವಕರು ಸೈಬರ್‌ ಗಾಳಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ.

ಗಾರೆ ಕೆಲಸ ಮಾಡಿಕೊಂಡು ನಗರದ ಜಯನಗರದಲ್ಲಿ ವಾಸವಿರುವ ಯಾದಗಿರಿ ಜಿಲ್ಲೆಯ ಹತ್ತಾರು ಯುವಕರು ಸೈಬರ್‌ ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಮೋಸ ಹೋಗಿದ್ದಾರೆ.

‘ನಮ್ಮ ಊರಿನ ಸಂಗಮೇಶ್‌ ಎಂಬುವರು COSTA ಲಿಂಕ್‌ ಕಳುಹಿಸಿ ಇನ್‌ಸ್ಟಾಲ್‌ ಮಾಡಿಕೊಂಡು ಹಣ ಹೂಡಿಕೆ ಮಾಡಿದರೆ, ದುಪ್ಪಟ್ಟು ಲಾಭ ಪಡೆಯಬಹುದು ಎಂದು ತಿಳಿಸಿದ್ದರು. ಅದರಂತೆ ಹಣ ಹಾಕಿ ₹10 ಲಕ್ಷ ಕಳೆದುಕೊಂಡಿದ್ದೇವೆ’ ಎಂದು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ತಿಪ್ಪಣ್ಣ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ADVERTISEMENT

‘ಮೊದಲ ಬಾರಿಗೆ ₹9,800 ಜಮಾ ಮಾಡಿದ್ದು, ನನ್ನ ಖಾತೆಗೆ ₹11 ಸಾವಿರ ವಾಪಸ್‌ ಹಾಕಿದ್ದರು. ಇದನ್ನು ನಂಬಿ ಬೇರೆಯವರಿಂದ ಹಣ ಪಡೆದು ₹5.18 ಲಕ್ಷ ಹಣವನ್ನು COSTA ಆ್ಯಪ್‌ನಲ್ಲಿ ಜಮಾ ಮಾಡಿದೆ. ನನ್ನ ಜತೆಗೆ ಕೆಲಸ ಮಾಡುತ್ತಿರುವ ಅಂಬರೀಶ್‌, ಶರಣಗೌಡ, ಆನಂದ, ಶಾಂತಪ್ಪ ಇತರರು ಸುಮಾರು ₹10 ಲಕ್ಷ ಹಣ ವರ್ಗಾಯಿಸಿದ್ದಾರೆ. ಇದೀಗ ಆ್ಯಪ್‌ ತೆರೆದುಕೊಳ್ಳುತ್ತಿಲ್ಲ. ಹಣ ಪಡೆದು ಮೋಸ ಮಾಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.