ADVERTISEMENT

ತುಮಕೂರು: ನಗರದಲ್ಲಿ ಮನೆ ಮಾಡಿದ ದಸರಾ ಸಂಭ್ರಮ

11 ದಿನದ ಆಚರಣೆಗೆ ವಿದ್ಯುಕ್ತ ಚಾಲನೆ; ವಿವಿಧ ಧಾರ್ಮಿಕ ಕೈಂಕರ್ಯ; ದೇವಿಗೆ ವಿಶೇಷ ಅಲಂಕಾರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:00 IST
Last Updated 23 ಸೆಪ್ಟೆಂಬರ್ 2025, 4:00 IST
<div class="paragraphs"><p>ತುಮಕೂರಿನಲ್ಲಿ ಸೋಮವಾರ ದಸರಾ ಪ್ರಯುಕ್ತ ಹೋಮ ನೆರವೇರಿತು. ಸಿದ್ಧಲಿಂಗ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಕನ್ನಿಕಾ ಪರಮೇಶ್ವರ, ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕರಾದ ಕೆ.ಎನ್.ರಾಜಣ್ಣ, ಸಿ.ಬಿ.ಸುರೇಶ್‌ ಬಾಬು, ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌, ಎಚ್.ಡಿ.ರಂಗನಾಥ್, ಎಚ್.ವಿ.ವೆಂಕಟೇಶ್ ಮೊದಲಾದವರು ಪಾಲ್ಗೊಂಡಿದ್ದರು</p></div>

ತುಮಕೂರಿನಲ್ಲಿ ಸೋಮವಾರ ದಸರಾ ಪ್ರಯುಕ್ತ ಹೋಮ ನೆರವೇರಿತು. ಸಿದ್ಧಲಿಂಗ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಕನ್ನಿಕಾ ಪರಮೇಶ್ವರ, ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕರಾದ ಕೆ.ಎನ್.ರಾಜಣ್ಣ, ಸಿ.ಬಿ.ಸುರೇಶ್‌ ಬಾಬು, ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌, ಎಚ್.ಡಿ.ರಂಗನಾಥ್, ಎಚ್.ವಿ.ವೆಂಕಟೇಶ್ ಮೊದಲಾದವರು ಪಾಲ್ಗೊಂಡಿದ್ದರು

   

ತುಮಕೂರು: ಜಿಲ್ಲಾ ಆಡಳಿತದಿಂದ ಆಯೋಜಿಸಿರುವ ‘ತುಮಕೂರು ದಸರಾ’ಗೆ ಸೋಮವಾರ ವಿದ್ಯುಕ್ತ ಚಾಲನೆ ದೊರೆಯಿತು.

ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಸಿದ್ಧಪಡಿಸಿರುವ ಧಾರ್ಮಿಕ ಮಂಟಪದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳು ಭೂಮಿ ಪೂಜೆ, ಧ್ವಜಾರೋಹಣ ನೆರವೇರಿಸಿದರು. ನಂದಿಧ್ವಜ ಕುಣಿತ, ಸೋಮನ ಕುಣಿತ, ವೀರಗಾಸೆ, ಕಂಸಾಳೆ, ಗಾರುಡಿ ಗೊಂಬೆ ಸೇರಿ ಹಲವು ಕಲಾ ತಂಡಗಳು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.

ADVERTISEMENT

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಮೈಸೂರಿಗೆ ಪ್ರತಿಯಾಗಿ ತುಮಕೂರು ದಸರಾ ನಡೆಯುತ್ತಿದೆ‌. ಇದು ಕೇವಲ ಧಾರ್ಮಿಕ ಕಾರ್ಯಕ್ರಮವಾಗದೆ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಆಗಬೇಕು’ ಎಂದು ಆಶಿಸಿದರು.

ನಮ್ಮ ಪರಂಪರೆಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವ ಇದೆ.‌‌‌ ಎಲ್ಲರನ್ನು ಒಟ್ಟಿಗೆ ಸೇರಿಸಿ, ಮನಸ್ಸು ಪವಿತ್ರಗೊಳಿಸಿ, ಭಾವನೆಗಳನ್ನು ಪರಿಶುದ್ಧಗೊಳಿಸುತ್ತವೆ. ನಮ್ಮ ಒಳಗಿನ ಕಲ್ಮಷ, ದುರ್ಗುಣ, ದುರ್ಬುದ್ಧಿ ದೂರ ಸರಿಸಿ ವಿಜಯದಶಮಿ ಆಚರಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೆಶ್ವರ, ‘ದಸರಾಗೆ ಯಾವುದೇ ಜಾತಿ, ಧರ್ಮ, ಪಕ್ಷದ ಭೇದ–ಭಾವ ಇಲ್ಲ. ಎಲ್ಲರಿಗೆ ಸಮಾಜ, ಪರಂಪರೆ, ಧಾರ್ಮಿಕ ವಿಚಾರಧಾರೆ ಮುಖ್ಯ. ಇಂದಿನ ಪೀಳಿಗೆಗೆ ಇತಿಹಾಸ ಪರಿಚಯಿಸುವ ಉದ್ದೇಶದಿಂದ ದಸರಾ ಆಚರಿಸಲಾಗುತ್ತಿದೆ. ಇದು ಜನರ ದಸರಾ. ಈಗಿನ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಂಸ್ಕೃತಿಕ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು’ ಎಂದರು.

ವಿಜಯನಗರ ಸಾಮ್ರಾಜ್ಯದಲ್ಲಿ ಶುರುವಾದ ದಸರಾ ಮೈಸೂರು ಸಾಮ್ರಾಜ್ಯದಿಂದ ಇಲ್ಲಿಯವರೆಗೆ ಸಾಗಿ ಬಂದಿದೆ. ಮುಂದಿನ ಪೀಳಿಗೆ ಇದೇ ಹಾದಿಯಲ್ಲಿ ಸಾಗಬೇಕು. ಮೈಸೂರಿಗೆ ಪ್ರತಿಯಾಗಿ, ಸರಿ ಸಮಾನವಾಗಿ ತುಮಕೂರು ದಸರಾ ಆಗುತ್ತದೆ. ಆದರೆ, ಮೈಸೂರು ಇತಿಹಾಸ ಬೇರೆ, ತುಮಕೂರಿನ ಇತಿಹಾಸ ಬೇರೆ. ಮೈಸೂರಿಗೆ ಹೋಗಲು ಆಗದವರಿಗೆ ಇಲ್ಲಿಯೇ ಎಲ್ಲವನ್ನು ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು.

ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಎಲೆರಾಂಪುರ ಕುಂಚಿಟಿಗ ಮಠದ ಹನುಂಮತನಾಥ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಧೀರಾನಂದ, ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು, ಶಾಸಕರಾದ ಕೆ.ಎನ್.ರಾಜಣ್ಣ, ಟಿ.ಬಿ.ಜಯಚಂದ್ರ, ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌, ಎಚ್.ಡಿ.ರಂಗನಾಥ್, ಎಚ್.ವಿ.ವೆಂಕಟೇಶ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಮಾಜಿ ಸಂಸದ‌ ಜಿ.ಎಸ್.ಬಸವರಾಜು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾಧಿಕಾರಿ ಶುಭ‌ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮೊದಲಾದವರು ಭಾಗವಹಿಸಿದ್ದರು.

ತುಮಕೂರಿನಲ್ಲಿ ಸೋಮವಾರ ನಡೆದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಕಲಾ ತಂಡಗಳು
ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ಹೆಲಿ ರೈಡ್‌ ಆರಂಭವಾಯಿತು

ಹೆಲಿಕಾಪ್ಟರ್ ಸುತ್ತಾಟ ಶುರು

ಹೆಲಿಕಾಪ್ಟರ್‌ನಲ್ಲಿ ಕುಳಿತು ನಗರ ಸುತ್ತುವ ಹೆಲಿ ರೈಡ್‌ಗೆ ಸೋಮವಾರ ಚಾಲನೆ ದೊರೆಯಿತು. ವಿಶ್ವವಿದ್ಯಾಲಯ ಆವರಣದಿಂದ ಹೆಲಿಕಾಪ್ಟರ್‌ ಹಾರಾಟ ಶುರುವಾಯಿತು. ಇದರ ಜತೆಗೆ ನಗರದ ಸರ್ವೋದಯ ಪ್ರೌಢಶಾಲೆಯಲ್ಲಿ ಹಾಟ್‌ ಏರ್‌ ಬಲೂನ್‌ ಹಾರಾಟವೂ ಪ್ರಾರಂಭವಾಯಿತು. ಜೂನಿಯರ್‌ ಕಾಲೇಜು ಮೈದಾನದಲ್ಲಿ ಮುಂದಿನ 10 ದಿನಗಳ ಕಾಲ ವಿಶೇಷ ಪೂಜೆ ನೆರವೇರಲಿದೆ. ಚಾಮುಂಡೇಶ್ವರಿ ದೇವಿಗೆ ಪ್ರತಿ ದಿನ ಒಂದೊಂದು ಅಲಂಕಾರ ಮಾಡಿ ಸಿಂಗರಿಸಲಾಗುತ್ತದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಲಿವೆ. ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಂಗ ದಸರಾ ನಾಟಕೋತ್ಸವ ಉದ್ಘಾಟಿಸಲಾಯಿತು. 9 ದಿನಗಳಲ್ಲಿ 15 ನಾಟಕ ಪ್ರದರ್ಶಿಸಲಾಗುತ್ತದೆ. ಸಂಜೆ ಟೌನ್‌ಹಾಲ್‌ ವೃತ್ತದಲ್ಲಿ ವಿದ್ಯುತ್‌ ದೀಪಾಲಂಕಾರ ಮತ್ತು ಅಂಬಾರಿ ಸಿಟಿ ಬಸ್‌ ಸಂಚಾರಕ್ಕೆ ಚಾಲನೆ ನೀಡಲಾಯಿತು.

ದಸರಾದಲ್ಲಿ ಇಂದು

ದೇವಿಗೆ ಮಹಾಲಕ್ಷ್ಮಿ ಅಲಂಕಾರ. ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭ. ಪ್ರುಡೆನ್ಸ್‌ ಶಾಲೆ ವಿದ್ಯಾರ್ಥಿಗಳಿಂದ ನೃತ್ಯ. ಎಂಪ್ರೆಸ್‌ ಬಾಲಕಿಯರಿಂದ ಜಾನಪದ ನೃತ್ಯ. ಶಾರದಾಂಬ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಸಪ್ತಗಿರಿ ಪದವಿ ಪೂರ್ವ ಕಾಲೇಜಿನಿಂದ ನೃತ್ಯ ಮಹಾಲಕ್ಷ್ಮಿ ಅಷ್ಟಕ ಕಲಾ ದರ್ಪಣ ವತಿಯಿಂದ ನೃತ್ಯ ರೂಪಕ ನರಸಿಂಹದಾಸ್‌ ಮತ್ತು ತಂಡದವರು ಕಥಾ ಕೀರ್ತನ ಪ್ರಸ್ತುತ ಪಡಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.