ತಿಪಟೂರು: ತುಮಕೂರು ದಸರಾವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ ತೀರ್ಮಾನಿಸಿದ್ದು, ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ 10 ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ನಗರದ ಸರ್ಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ದಸರಾ ಆಚರಣೆ ವಿಷಯವಾಗಿ ಏರ್ಪಡಿಸಿದ್ದ ಪ್ರಬಂಧ ಹಾಗೂ ಆಶುಭಾಶಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಈ ಬಾರಿಯ ದಸರಾದಲ್ಲಿ ವಿಶೇಷವಾಗಿ ಪ್ಯಾರಾ ಗ್ಲೈಡಿಂಗ್ ಮತ್ತು ಹೆಲಿಕಾಪ್ಟರಿಂಗ್ ಆಯೋಜಿಸಲಾಗಿದೆ. ಅರ್ಜುನ್ ಜನ್ಯ ಮ್ಯೂಸಿಕಲ್ ನೈಟ್ಸ್ ಇರಲಿದೆ. ನಟಿ ರಮ್ಯಾ ಹಾಗೂ ನಟ ವಿನಯ್ ರಾಜಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಸ್ವತಃ ಮುತುವರ್ಜಿವಹಿಸಿ ಈ ಬಾರಿಯ ತುಮಕೂರು ದಸರಾವನ್ನು ಅದ್ದೂರಿಯಾಗಿಸಲು ಪ್ರಯತ್ನಿಸುತ್ತಿದ್ದು ಮೂರು ಆನೆಗಳು ಉತ್ಸವದಲ್ಲಿ ಭಾಗವಹಿಸಲಿವೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದಲೂ ತುಮಕೂರಿಗೆ ಹೋಗಿ ಬರಲು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎನ್.ಕಾಂತರಾಜು, ಪ್ರಾಂಶುಪಾಲ ಶಶಿಕುಮಾರ್, ಕಸಾಪ ಅಧ್ಯಕ್ಷ ಎಂ.ಬಸವರಾಜಪ್ಪ, ದೇವರಾಜ ಅರಸು ನಿಗಮದ ತಮ್ಮಯ್ಯ, ಕೌಶಲ್ಯಪಥ ನಿರ್ದೇಶಕ, ದಿಲೀಪ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.