ADVERTISEMENT

ತುಮಕೂರು: ಗಾಜಿನಮನೆ ನವೀಕರಣಕ್ಕೆ ₹3 ಕೋಟಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:15 IST
Last Updated 1 ಫೆಬ್ರುವರಿ 2026, 7:15 IST
ತುಮಕೂರಿನಲ್ಲಿ ಶನಿವಾರ ಟೂಡಾ ಬಜೆಟ್ ಸಭೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಟೂಡಾ ಆಯುಕ್ತ ಉಮೇಶ್‍ಚಂದ್ರ, ಪಾಲಿಕೆ ಆಯುಕ್ತರಾದ ಶುಭ, ಎಎಸ್‌ಪಿ ಸಿ.ಗೋಪಾಲ್ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಶನಿವಾರ ಟೂಡಾ ಬಜೆಟ್ ಸಭೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಟೂಡಾ ಆಯುಕ್ತ ಉಮೇಶ್‍ಚಂದ್ರ, ಪಾಲಿಕೆ ಆಯುಕ್ತರಾದ ಶುಭ, ಎಎಸ್‌ಪಿ ಸಿ.ಗೋಪಾಲ್ ಇತರರು ಉಪಸ್ಥಿತರಿದ್ದರು   

ತುಮಕೂರು: ಸಾಕಷ್ಟು ಸಮಸ್ಯೆಗಳಿಗೆ ಸಿಲುಕಿದ್ದ ಅಮಾನಿಕೆರೆಯಲ್ಲಿರುವ ಗಾಜಿನ ಮನೆ ನವೀಕರಣಕ್ಕೆ ₹3 ಕೋಟಿ, ಅಮಾನಿಕೆರೆಯಲ್ಲಿ ಜಲಕ್ರೀಡೆ ಅಕಾಡೆಮಿ ಸ್ಥಾಪನೆ, ಊರ್ಡಿಗೆರೆ ಹೋಬಳಿ ಮಾಚನಹಳ್ಳಿಯಲ್ಲಿ ಸುಸಜ್ಜಿತ ಬಡಾವಣೆ ನಿರ್ಮಾಣ ಮಾಡಲು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ನಿರ್ಧರಿಸಿದೆ.

2026-27ನೇ ಸಾಲಿನ ಟೂಡಾ ಬಜೆಟ್‌ನಲ್ಲಿ ಈ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಬಜೆಟ್‌ಗೆ ಒಪ್ಪಿಗೆ ನೀಡಲಾಗಿದೆ.

ಅಮಾನಿಕೆರೆಯಲ್ಲಿರುವ ಗಾಜಿನ ಮನೆಯಲ್ಲಿ ವರ್ಷವಿಡೀ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಮಳೆಗಾಲದಲ್ಲಿ ಗಾಳಿ- ಮಳೆಗೆ ಗಾಜುಗಳು ಒಡೆದು ಅಸ್ತವ್ಯಸ್ತವಾಗುತ್ತಿರುತ್ತವೆ. ಪ್ರತಿಧ್ವನಿ ನಿಯಂತ್ರಣ ವ್ಯವಸ್ಥೆ ಇಲ್ಲವಾಗಿದ್ದು, ಪ್ರಸ್ತುತ ಮೀಸಲಿಟ್ಟಿರುವ ₹1.50 ಕೋಟಿ ಹಣ ಸಾಲುವುದಿಲ್ಲ. ಅನುದಾನದ ಮೊತ್ತ ಹೆಚ್ಚಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಭೆಯಲ್ಲಿ ಸಲಹೆ ಮಾಡಿದರು. ಇದನ್ನು ಪರಿಗಣಿಸಿ ₹3 ಕೋಟಿಗೆ ಹೆಚ್ಚಳ ಮಾಡಿ ಅನುಮೋದನೆ ನೀಡಲಾಯಿತು.

ADVERTISEMENT

ತುಮಕೂರು ಅಮಾನಿಕೆರೆಯಲ್ಲಿ ಕಯಾಕಿಂಗ್ ಹಾಗೂ ಕೆನೋಯಿಂಗ್ ಜಲಕ್ರೀಡಾ ಅಕಾಡೆಮಿ ಸ್ಥಾಪಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ನಗರ ರಿಂಗ್ ರಸ್ತೆಯಲ್ಲಿರುವ ದಿಬ್ಬೂರು ವೃತ್ತದಲ್ಲಿ ಅಪಘಾತ ಹೆಚ್ಚಳವಾಗಿದ್ದು, ಪೊಲೀಸರ ಸಲಹೆಯಂತೆ ಅಭಿವೃದ್ಧಿಪಡಿಸುವುದು. ಗೆದ್ದಲಹಳ್ಳಿ ಗ್ರಾಮದಲ್ಲಿ ಅಂಕಿತ ಎಜುಕೇಷನ್ ಟ್ರಸ್ಟ್‌ಗೆ ಹಂಚಿಕೆಯಾಗಿರುವ ನಾಗರಿಕ ಸೌಕರ್ಯ ನಿವೇಶನದ ಉದ್ದೇಶ ಬದಲಾವಣೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.

ಟೂಡಾ ಆಯುಕ್ತ ಉಮೇಶ್‍ಚಂದ್ರ ಬಜೆಟ್ ಮಂಡಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ್ ಉಪಸ್ಥಿತರಿದ್ದರು.

ಮಾಚನಹಳ್ಳಿ ಬಳಿ ಟೂಡಾ ಬಡಾವಣೆ

ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಮಾಚನಹಳ್ಳಿ ಗ್ರಾಮದ ಬಳಿ 56 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ. ರೈತರಿಂದ ವಶಪಡಿಸಿಕೊಳ್ಳುವ ಜಮೀನಿಗೆ ಪರಿಹಾರ ಅಥವಾ 50:50 ಅನುಪಾತದ ಪಾಲುದಾರಿಕೆಯಲ್ಲಿ ಬಡಾವಣೆ ನಿರ್ಮಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.