
ತುಮಕೂರು: ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ 6 ತಾಯಂದಿರು, 176 ಶಿಶುಗಳು ಸಾವನ್ನಪ್ಪಿವೆ. ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 90 ಶಿಶುಗಳು ಉಸಿರು ಚೆಲ್ಲಿವೆ.
ಪ್ರಸಕ್ತ ವರ್ಷದಲ್ಲಿ ಗುಬ್ಬಿ, ಮಧುಗಿರಿ, ಶಿರಾ, ತಿಪಟೂರು ತಾಲ್ಲೂಕುಗಳಲ್ಲಿ ತಲಾ 1, ತುಮಕೂರಿನಲ್ಲಿ 2 ಸೇರಿ 6 ತಾಯಂದಿರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 12, ಗುಬ್ಬಿ, ಮಧುಗಿರಿಯಲ್ಲಿ ತಲಾ 7, ಕೊರಟಗೆರೆ 5, ಕುಣಿಗಲ್ 8, ಪಾವಗಡ 10, ಶಿರಾ 13, ತಿಪಟೂರು 15, ತುರುವೇಕೆರೆ 9 ಹಾಗೂ ತುಮಕೂರಿನ 90 ಸೇರಿದಂತೆ ಒಟ್ಟು 176 ಶಿಶುಗಳು ಮರಣ ಹೊಂದಿವೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಯಿ ಹಾಗೂ ಶಿಶು ಮರಣ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಸಿ.ಆರ್.ಮೋಹನ್ ಈ ಕುರಿತು ಮಾಹಿತಿ ಹಂಚಿಕೊಂಡರು.
2024ರ ಏಪ್ರಿಲ್‌ನಿಂದ 2025ರ ಮಾರ್ಚ್ ವರೆಗೆ ಚಿಕ್ಕನಾಯಕನಹಳ್ಳಿ, ಶಿರಾ, ತಿಪಟೂರು ತಾಲ್ಲೂಕಿನಲ್ಲಿ ತಲಾ 2, ಮಧುಗಿರಿ, ಪಾವಗಡ ತಲಾ 1, ತುಮಕೂರು ತಾಲ್ಲೂಕಿನಲ್ಲಿ 11 ಸೇರಿ 19 ತಾಯಿ ಮರಣ, 292 ಶಿಶು ಮರಣ ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ‘ಶಿಶು ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಬೇಕು. ಉತ್ತಮ ಅನುಭವ ಇರುವ ವೈದ್ಯರು ಜಿಲ್ಲೆಯಲ್ಲಿ ಇದ್ದರೂ ಶಿಶು ಮರಣ ಪ್ರಕರಣ ಹೆಚ್ಚಾಗಿರುವುದು ಆತಂಕಕಾರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಕಾರ್ಯ ವೈಖರಿ ಪರಿಶೀಲಿಸಬೇಕು. ಕಾಲ ಕಾಲಕ್ಕೆ ಕುಂದುಕೊರತೆ ಸಭೆ ನಡೆಸಬೇಕು. ಸಮಸ್ಯೆ ಆಲಿಸಿ, ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಡಾ.ಯೋಗೀಶ್ ಇತರರು ಹಾಜರಿದ್ದರು.
ಸಿಸೇರಿಯನ್ ಹೆಚ್ಚಾದರೆ ಕ್ರಮ
ಜಿಲ್ಲೆಯಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿದೆ. ಶೇ 40ಕ್ಕಿಂತ ಹೆಚ್ಚು ಸಿಸೇರಿಯನ್ ಹೆರಿಗೆಗಳು ದಾಖಲಾದರೆ ಕೆಪಿಎಂಇ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಎಚ್ಚರಿಸಿದರು. ಹೆರಿಗೆ ವಿಭಾಗಕ್ಕೆ ತಜ್ಞ ವೈದ್ಯರನ್ನು ನಿಯೋಜಿಸಬೇಕು. ತರಬೇತಿ ನಿರತರನ್ನು ಕಾರ್ಯಕ್ಕೆ ಕಳುಹಿಸಬಾರದು. ಹೆರಿಗೆಗೆ ಬಂದವರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಒದಗಿಸಬೇಕು ಎಂದು ನಿರ್ದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.