ತುಮಕೂರು: ಡೀಸೆಲ್ ಬೆಲೆ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಮಧ್ಯರಾತ್ರಿಯಿಂದ ಜಿಲ್ಲೆಯಲ್ಲಿ ಲಾರಿ ಮುಷ್ಕರ ಆರಂಭವಾಗಿದೆ.
ಒಂದು ಸಂಘ ಮುಷ್ಕರಕ್ಕೆ ಬೆಂಬಲ ನೀಡಿದ್ದರೆ, ಮತ್ತೊಂದು ಸಂಘ ಹೋರಾಟದಲ್ಲಿ ಭಾಗವಹಿಸಿಲ್ಲ. ಹಾಗಾಗಿ ಜಿಲ್ಲೆಯಲ್ಲಿರುವ ಲಾರಿಗಳಲ್ಲಿ ಅರ್ಧದಷ್ಟು ಸಂಖ್ಯೆಯ ಲಾರಿ ಮಾಲೀಕರಷ್ಟೇ ಮುಷ್ಕರದಲ್ಲಿ ಭಾಗವಹಿಸಿದ್ದಾರೆ.
ಜಿ.ಆರ್.ಷಣ್ಮುಖಪ್ಪ ನೇತೃತ್ವದ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘ ಪ್ರತಿಭಟನೆಯಲ್ಲಿ ಭಾಗವಹಿಸಿದೆ. ಬಿ.ಚನ್ನಾರೆಡ್ಡಿ ನೇತೃತ್ವದ ಕರ್ನಾಟಕ ಲಾರಿ ಮಾಲೀಕರ ಸಂಘಗಳ ಒಕ್ಕೂಟ ಲಾರಿ ಮುಷ್ಕರದಿಂದ ದೂರ ಉಳಿದಿದೆ.
ಡೀಸೆಲ್ ಮೇಲಿನ ಸೆಸ್ ಕಡಿತ ಮಾಡಬೇಕು, ಅಂತರರಾಜ್ಯ ಚೆಕ್ ಪೋಸ್ಟ್ ರದ್ದುಪಡಿಸಬೇಕು, ರಾಜ್ಯ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾ ಮುಚ್ಚುವಂತೆ ಆಗ್ರಹಿಸಿ ಲಾರಿ ಮಾಲೀಕರು ಮುಷ್ಕರಕ್ಕೆ ಇಳಿದಿದ್ದಾರೆ. ಗೂಡ್‌ಶೆಡ್‌ನಿಂದ ಸರಕು ಸಾಗಣೆ, ಹಾಲು, ಹಣ್ಣು, ತರಕಾರಿ ಸಾಗಣೆಗೆ ಸದ್ಯಕ್ಕೆ ಯಾವುದೇ ವ್ಯತ್ಯಯವಾಗಿಲ್ಲ.
ಒಂದು ಬಣದ ಲಾರಿ ಮಾಲೀಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಸಾಕಷ್ಟು ಸಂಖ್ಯೆಯ ಲಾರಿಗಳು ರಸ್ತೆಗೆ ಇಳಿಯಲಿಲ್ಲ. ನಗರದ ಹೊರ ವಲಯದ ರಿಂಗ್ ರಸ್ತೆ, ಲಾರಿ ನಿಲ್ದಾಣಗಳಲ್ಲಿ ನಿಂತಿದ್ದು ಮಂಗಳವಾರ ಕಂಡು ಬಂತು. ಹೋರಾಟ ತೀವ್ರಗೊಂಡರೆ ಬುಧವಾರದಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳಬಹುದು ಎನ್ನಲಾಗಿದೆ.
‘ನಮ್ಮ ಸಂಘ ಮುಷ್ಕರದಲ್ಲಿ ಭಾಗವಹಿಸಿಲ್ಲ. ನಮ್ಮ ಸಂಘದ ಸದಸ್ಯರ ಲಾರಿಗಳು ಎಂದಿನಂತೆ ಸಂಚರಿಸುತ್ತಿವೆ’ ಎಂದು ಲಾರಿ ಮಾಲೀಕರ ಸಂಘಗಳ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ ಕುಮಾರ್ ಸ್ಪಷ್ಟಪಡಿಸಿದರು.
ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿದ್ದು ದೂರವಾಣಿ 0816-2278473 ಸಂಪರ್ಕಿಸಬಹುದು. ಹಾಲು ಆಮ್ಲಜನಕ ಸಿಲಿಂಡರ್ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಂದರೆಯಾದರೆ ಸಂಪರ್ಕಿಸಬಹುದು. ಇದು ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ.ಪ್ರಸಾದ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.