
ತುಮಕೂರು: ನಗರದ ಕೃಷ್ಣನಗರದ ಎನ್.ನವೀನ್ ಎಂಬುವರು ಪಾರ್ಟ್‌ಟೈಮ್ ಕೆಲಸ ಆಮಿಷಕ್ಕೆ ಒಳಗಾಗಿ ₹6.25 ಲಕ್ಷ ಕಳೆದುಕೊಂಡಿದ್ದಾರೆ. ಹಣ ವಾಪಸ್ ಕೊಡಿಸುವಂತೆ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವಾಟ್ಸ್ ಆ್ಯಪ್ ಮುಖಾಂತರ ಮೆಸೇಜ್ ಮಾಡಿದ ಆರೋಪಿಗಳು ‘ಗ್ರೀನ್ ಸೀಡ್’ ಕಂಪನಿಯಿಂದ ಸಂಪರ್ಕಿಸುತ್ತಿರುವುದಾಗಿ ತಿಳಿಸಿದ್ದಾರೆ. ನಮ್ಮ ಕಂಪನಿಯಲ್ಲಿ ಪಾರ್ಟ್‌ಟೈಮ್ ಕೆಲಸ ಇದ್ದು, ‘ಗಾಯತ್ರಿ’ ಎಂಬುವರ ಟೆಲಿಗ್ರಾಮ್‌ನಲ್ಲಿ ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ನವೀನ್ ಅದರಂತೆ ಟೆಲಿಗ್ರಾಮ್ ಖಾತೆಯಲ್ಲಿ ಬ್ಯಾಂಕ್ ವಿವರ ನೀಡಿದ್ದಾರೆ. ನಂತರ ಅವರನ್ನು ಗ್ರೂಪ್‌ಗೆ ಸೇರಿಸಿ ಹೋಟೆಲ್‌ಗಳಿಗೆ ರಿವ್ಯೂ ನೀಡುವಂತೆ ಹೇಳಿದ್ದಾರೆ.
ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ನೀಡಲಾಗುತ್ತದೆ ಎಂದು ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವರು ನಮಗೆ ಕಮಿಷನ್ ಬಂದಿದೆ ಎಂದು ಬ್ಯಾಂಕ್ ವಿವರಗಳನ್ನು ಗ್ರೂಪ್‌ನಲ್ಲಿ ಹಾಕಿದ್ದಾರೆ. ಇದನ್ನು ನಂಬಿದ ನವೀನ್ ಎರಡು ಹಂತದಲ್ಲಿ ₹21,163 ಹೂಡಿಕೆ ಮಾಡಿದ್ದಾರೆ. ವಾಪಸ್ ಅವರ ಖಾತೆಗೆ ₹27,598 ಜಮಾ ಆಗಿದೆ. ಇದೇ ರೀತಿ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂಬ ಮಾತಿಗೆ ಮರುಳಾಗಿ ಹಂತ ಹಂತವಾಗಿ ಒಟ್ಟು ₹6,76,069 ವರ್ಗಾಯಿಸಿದ್ದಾರೆ. ಇದರಲ್ಲಿ ₹52,528 ಮಾತ್ರ ವಾಪಸ್ ಬಂದಿದೆ.
ಹಣ ವಿತ್ ಡ್ರಾ ಮಾಡಬೇಕಾದರೆ ಇನ್ನೂ ₹4.50 ಲಕ್ಷ ವರ್ಗಾವಣೆ ಮಾಡುವಂತೆ ಸೈಬರ್ ವಂಚಕರು ಹೇಳಿದ್ದಾರೆ. ನವೀನ್ ಇದರಿಂದ ಅನುಮಾನಗೊಂಡು ಠಾಣೆಯ ಮೆಟ್ಟಿಲು ಹತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.