ತುಮಕೂರು: ಹೊಸದಾಗಿ ನಿರ್ಮಿಸಿದ ಮನೆ, ಇತರೆ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಬುಧವಾರ ಕರ್ನಾಟಕ ವಿದ್ಯುತ್ ಸೇನೆ, ವಿದ್ಯುತ್ ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರು ಪ್ರತಿಭಟನೆ ನಡೆಸಿದರು.
ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
‘ವಾಸ ಯೋಗ್ಯ ದೃಢೀಕರಣ ಪತ್ರ (ಒಸಿ) ಇಲ್ಲದ ಗ್ರಾಹಕರಿಗೆ ವಿದ್ಯುತ್ ಸರಬರಾಜು ನೀಡದಂತೆ ಸರ್ಕಾರ ಎಸ್ಕಾಂಗಳಿಗೆ ಸೂಚಿಸಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ವಹಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದರಿಂದ ಜನರು ವಿದ್ಯುತ್ ಸಂಪರ್ಕ ಇಲ್ಲದೆ ಪರದಾಡುವಂತಾಗಿದೆ. ಇತರೆ ರಾಜ್ಯಗಳಲ್ಲಿ ದೃಢೀಕರಣ ಪತ್ರ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಪರವಾನಗಿ ಪಡೆದು ನಿರ್ಮಿಸಿದ ಮನೆ, ವಾಣಿಜ್ಯ ಸಂಕೀರ್ಣ, ಕೈಗಾರಿಕಾ ಪ್ರದೇಶಕ್ಕೂ ಒ.ಸಿ ತಂದರೆ ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ. ಕಳೆದ ಮೂರು ತಿಂಗಳಿಂದ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ಮನೆ ನಿರ್ಮಿಸುವ ತನಕ ಸುಮ್ಮನಿದ್ದು, ಈಗ ಒ.ಸಿ ಇದ್ದರೆ ಮಾತ್ರ ವಿದ್ಯುತ್ ನೀಡಲಾಗುವುದು ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ಅಧಿಕೃತ ಮನೆ, ವಾಣಿಜ್ಯ ಸಂಕೀರ್ಣಕ್ಕೆ ಮಹಾನಗರ ಪಾಲಿಕೆಯಲ್ಲಿ ಒ.ಸಿ ಕೊಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸರ್ಕಾರದಿಂದ ನಿರ್ದೇಶನ ಬಂದಿಲ್ಲ ಎನ್ನುತ್ತಾರೆ. ಇಂತಹ ದ್ವಂದ್ವ ನೀತಿಯಿಂದ ಲಕ್ಷಾಂತರ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಮನೆ ಕಟ್ಟಲು ಪರವಾನಗಿ ತೆಗೆದುಕೊಳ್ಳಬೇಕು ಎಂದರೆ ಹೇಗೆ ಸಾಧ್ಯ? ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.