ADVERTISEMENT

ತುಮಕೂರು | ಪಿಯು ಪರೀಕ್ಷೆ: ಬಾಲಕಿಯರೇ ಅಧಿಕ

ವಾಣಿಜ್ಯ ವಿಭಾಗಕ್ಕೆ ಹೆಚ್ಚಿದ ಬೇಡಿಕೆ; ಕಲಾ ವಿಭಾಗದಲ್ಲಿ ತೀವ್ರ ಕುಸಿತ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 7:48 IST
Last Updated 20 ಫೆಬ್ರುವರಿ 2026, 7:48 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳುವ ಬಾಲಕಿಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಸಾಗಿದ್ದು, ಈ ವರ್ಷವೂ ಬಾಲಕರಿಗಿಂತ ಬಾಲಕಿಯರು ಅಧಿಕ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದ್ದಾರೆ.

ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಾಲಕರಿಗಿಂತ ಬಾಲಕಿಯರು 4,860 ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 23,216 ಮಂದಿ ಪರೀಕ್ಷೆಗೆ ನೋಂದಣಿ ಮಾಡಿಸಿದ್ದು, ಬಾಲಕರು 9,178, ಬಾಲಕಿಯರು 14,038 ಇದ್ದಾರೆ. ಬಾಲಕರಿಗಿಂತ ಬಾಲಕಿಯರ ಸಂಖ್ಯೆ 4,860ರಷ್ಟು ಹೆಚ್ಚಾಗಿರುವುದು ಇತ್ತೀಚಿನ ವರ್ಷಗಳಲ್ಲಿ ದಾಖಲೆಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಪ್ರತಿ ವರ್ಷವೂ ಬಾಲಕಿಯರ ಸಂಖ್ಯೆ ಏರುಗತಿಯಲ್ಲೇ ಇದೆ. 2023ರಲ್ಲಿ 2,363, 2024ರಲ್ಲಿ 3,536, 2025ರಲ್ಲಿ 4,136 ಹಾಗೂ 2026ರಲ್ಲಿ 4,860 ಮಂದಿ ಬಾಲಕರಿಗಿಂತ ಬಾಲಕಿಯರು ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ಎದುರಿಸಿದ್ದಾರೆ.

ADVERTISEMENT

ಕಳೆದ ಮೂರು ವರ್ಷಗಳ ಅಂಕಿಅಂಶ ಗಮನಿಸಿದರೆ ಪರೀಕ್ಷೆ ತೆಗೆದುಕೊಂಡ ಬಾಲಕಿಯರ ಸಂಖ್ಯೆ 14,000ದಿಂದ 14,500ರ ನಡುವೆ ಇದೆ. 2023ರಲ್ಲಿ 12 ಸಾವಿರದಷ್ಟಿದ್ದ ಬಾಲಕರ ಸಂಖ್ಯೆ, ನಂತರದ ವರ್ಷಗಳಲ್ಲಿ 10 ಸಾವಿರಕ್ಕೆ ಇಳಿಕೆಯಾಗಿದೆ. ಆದರೆ ಈ ವರ್ಷ (2026) ಈ ಸಂಖ್ಯೆ ಮತ್ತಷ್ಟು ಕುಸಿದಿದ್ದು, 9 ಸಾವಿರಕ್ಕೆ ತಲುಪಿದೆ. ಬಾಲಕಿಯರ ಸಂಖ್ಯೆ ಈ ವರ್ಷವೂ 14 ಸಾವಿರದ ಹಂತದಲ್ಲೇ ಮುಂದುವರಿದಿದೆ.

ಎಸ್‌ಎಸ್‌ಎಲ್‌ಸಿ ತೇರ್ಗಡೆ ನಂತರ ಬಾಲಕರು ಪಿಯುಸಿ ಬದಲಾಗಿ ಐಟಿಐ, ಡಿಪ್ಲೊಮಾದಂತಹ ವೃತ್ತಿಪರ ಕೋರ್ಸ್‌ಗಳ ಕಡೆಗೆ ಹೋಗಿರಬಹುದು. ಇಲ್ಲವೆ ಕೆಲವರು ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಿರಬಹುದು. ಲಿಂಗಾನುಪಾತದಲ್ಲೂ ವ್ಯತ್ಯಾಸ ಆಗುತ್ತಿರಬಹುದು. ಒಟ್ಟಾರೆಯಾಗಿ ಪಿಯುಸಿ ಅಭ್ಯಾಸ ಮಾಡಲು ಬರುವ ಬಾಲಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಂಡು ಬರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಲಾ ವಿಭಾಗ ಕುಸಿತ: ವರ್ಷದಿಂದ ವರ್ಷಕ್ಕೆ ಕಲಾ ವಿಭಾಗಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ವರ್ಷ ವಿಜ್ಞಾನ ವಿಭಾಗದಲ್ಲಿ 10,559 ಮಂದಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 8,559 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರೆ, ಕಲಾ ವಿಭಾಗದ ಸಂಖ್ಯೆ 4,625ಕ್ಕೆ ಇಳಿಕೆಯಾಗಿದೆ. ವಿಜ್ಞಾನ ವಿಭಾಗದ ಅರ್ಧದಷ್ಟು ವಿದ್ಯಾರ್ಥಿಗಳೂ ಕಲಾ ವಿಭಾಗದಲ್ಲಿ ಇಲ್ಲವಾಗಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ಸಾಕಷ್ಟು ಪಿಯು ಕಾಲೇಜುಗಳಲ್ಲಿ ಕಲಾ ವಿಭಾಗವನ್ನೇ ಮುಚ್ಚಬೇಕಾದ ಪರಿಸ್ಥಿತಿ ಬರಬಹುದು ಎಂದು ಉಪನ್ಯಾಸಕ ನಂಜುಂಡಸ್ವಾಮಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.