
ತುಮಕೂರು: ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಸಮುದಾಯದ ರೈತರನ್ನು ಒಕ್ಕಲೆಬ್ಬಿಸದಂತೆ ಈಗಾಗಲೇ ಆಯೋಗದಿಂದ ಆದೇಶ ಹೊರಡಿಸಲಾಗಿದೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎಲ್.ಮೂರ್ತಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಹಲವು ವರ್ಷಗಳಿಂದ ಪರಿಶಿಷ್ಟರು ಸಾಗುವಳಿ ಮಾಡುತ್ತಿದ್ದಾರೆ. ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವುದು ಮುಂದುವರಿದರೆ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ ಸರ್ಕಾರದಿಂದಲೇ ಆದೇಶ ಹೊರಡಿಸಲಾಗುವುದು ಎಂದು ಎಚ್ಚರಿಸಿದರು.
ಜಮೀನು ತಕರಾರು, ನಿವೇಶನ, ಸ್ಮಶಾನ ಭೂಮಿ, ನೀರು, ರಸ್ತೆ, ಮೂಲಭೂತ ಸೌಲಭ್ಯದ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬಂದವು. ‘ಅಂತರಸನಹಳ್ಳಿಯಲ್ಲಿ ಒಂದು ಪುಟ್ಟ ಮನೆಯಲ್ಲಿ ಐದಾರು ಜನ ವಾಸಿಸುತ್ತಿದ್ದಾರೆ. ಇದು ಜಿಲ್ಲೆಯಾದ್ಯಂತ ಇರುವ ಪರಿಶಿಷ್ಟರ ಸ್ಥಿತಿಗತಿ. ಅರ್ಹರಿಗೆ ನಿವೇಶನ ಹಂಚಿಕೆ ಮಾಡಿ, ಮನೆ ನಿರ್ಮಾಣಕ್ಕೆ ಅನುದಾನ ನೀಡಬೇಕು’ ಎಂದು ಅಂತರಸನಹಳ್ಳಿ ಲಕ್ಷ್ಮಿದೇವಮ್ಮ ಒತ್ತಾಯಿಸಿದರು.
ಮಂಜೂರಾದ ಮನೆಗಳು ಅರ್ಧಂಬರ್ಧ ಆಗಿದ್ದು, ಬಿಲ್ ಬಿಡುಗಡೆಯಾಗಿಲ್ಲ. ಜಿಲ್ಲಾಧಿಕಾರಿ ಕನಿಷ್ಠ ಬಂದು ಪರಿಶೀಲನೆ ಮಾಡುತ್ತಿಲ್ಲ. ಕಚೇರಿಗಳಿಗೆ ಅಲೆಯುವುದು ನಮ್ಮ ಕೆಲಸವಾಗಿದೆ. ಕಸದ ವಾಹನ ಬರಲ್ಲ. ಅಧಿಕಾರಿ ವರ್ಗಕ್ಕೆ ನಮ್ಮ ಕಷ್ಟ ಬೇಡವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡ ಮಾರಣ್ಣ ಪಾಳೆಗಾರ್, ‘ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಕೊಳವೆಬಾವಿ ಕೊರೆಸುವಲ್ಲಿ ಅವ್ಯವಹಾರ ಆಗಿದೆ. ಭ್ರಷ್ಟಾಚಾರಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿ ಐದಾರು ತಿಂಗಳು ಕಳೆದರೂ ಯಾವುದೇ ಕ್ರಮ ಆಗಿಲ್ಲ. ಜಿಲ್ಲಾಧಿಕಾರಿ ಕಚೇರಿಗೆ ಅಲೆದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.
ಎಸ್‌ಸಿ, ಎಸ್‌ಟಿ ಆಯೋಗದ ಸದಸ್ಯ ಎಂ.ಕುಂಬಯ್ಯ, ಕಾರ್ಯದರ್ಶಿ ಎಚ್.ಎಸ್.ಶಿವರಾಮು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಇತರರು ಉಪಸ್ಥಿತರಿದ್ದರು.
ದಂಡಿನಶಿವರಕ್ಕೆ ಅಂಬೇಡ್ಕರ್ ವಸತಿ ಶಾಲೆ ಮಂಜೂರಾಗಿದ್ದು ಸ್ವಂತ ಕಟ್ಟಡವಿಲ್ಲ. ಸಮುದಾಯ ಭವನದಲ್ಲಿ ಶಾಲೆ ನಡೆಯುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಬೇಕುದಂಡಿನಶಿವರ ಕುಮಾರ್ ಮುಖಂಡ
ತುಮಕೂರು ನಗರದ ಕಾಲೊನಿ ನಿವಾಸಿಗಳಿಗೆ ಅಗತ್ಯ ದಾಖಲೆ ನೀರು ಒದಗಿಸಬೇಕು. ಸಮುದಾಯದ ಭವನ ನಿರ್ಮಿಸಬೇಕು. ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಸಮರ್ಪಕವಾಗಿ ಬಳಕೆಯಾಗಬೇಕುಅರುಣ್ ಮುಖಂಡ ಸ್ಲಂ ಸಮಿತಿ
ಚಿಕ್ಕನಾಯಕನಹಳ್ಳಿಯಲ್ಲಿ ಅಂಬೇಡ್ಕರ್ ಭವನ ವಾಲ್ಮೀಕಿ ಭವನ ನಿರ್ಮಾಣ ಕಾರ್ಯ ಮುಗಿಯುತ್ತಿಲ್ಲ. ಬಾಕಿ ಅನುದಾನ ಬಿಡುಗಡೆ ಮಾಡಬೇಕು. ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ವೇತನ ಲ್ಯಾಪ್‌ಟಾಪ್ ವಿತರಿಸಬೇಕುಸಿಂಗದಹಳ್ಳಿ ರಾಜಕುಮಾರ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.