ADVERTISEMENT

ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡುವಂತೆ ವಾಟಾಳ್ ಒತ್ತಾಯ

ಮರಾಠಾ ಅಭಿವೃದ್ಧಿ ನಿಗಮ ರದ್ದುಗೊಳಿಸಲು ಆಗ್ರಹಿಸಿ ಜ.9ರಂದು ರೈಲು ಹಳಿಗಳ ಮೇಲೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 8:40 IST
Last Updated 19 ಡಿಸೆಂಬರ್ 2020, 8:40 IST
ವಾಟಾಲ್‌ ನಾಗರಾಜ್‌
ವಾಟಾಲ್‌ ನಾಗರಾಜ್‌   

ತುಮಕೂರು: ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸಿದ್ದಗಂಗಾ ಮಠದ ಬಳಿಯ ರೈಲ್ವೆ ಹಳಿ ಮೇಲೆ ಕುಳಿತು ಶನಿವಾರ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದಿದ್ದೇ ಸಿದ್ದಗಂಗಾ ಮಠದಿಂದ. ಆದರೆ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಿಸಲು ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಲಿಲ್ಲ ಎಂದು ದೂರಿದರು.

ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ನಾಟಕವಾಡುತ್ತಿದ್ದಾರೆ. ಯಡಿಯೂರಪ್ಪ ಧೈರ್ಯವಾಗಿ ಹೇಳಬೇಕು ಭಾರತ ರತ್ನ ಕೊಡಲಿಲ್ಲ ಅಂದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು. ಸಂಸದರೂ ಈ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದರು.

ADVERTISEMENT

ಜೆಡಿಎಸ್ ನಾಯಕ ಎಚ್.ಡಿ.ಕುಮಾರ ಸ್ವಾಮಿ ಅವರೂ ಹೇಳಿದ್ದರು. ನಮ್ಮ ಸರ್ಕಾರ ಬಂದರೆ ಭಾರತ ರತ್ನ ಕೊಡಿಸುವೆ ಎಂದು. ಆದರೆ ಈಗ ಮರೆತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಜ.26 ರ ನಂತರ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಮರಾಠಾ ಅಭಿವೃದ್ಧಿ ನಿಗಮ ರದ್ದುಗೊಳಿಸಬೇಕು. ಮೊದಲ ಚಳವಳಿ ಮುಗಿಸಿದ್ದೇವೆ. ಜ.9ಕ್ಕೆ ಎರಡನೇ ಹಂತದ ಹೋರಾಟ ಹಮ್ಮಿಕೊಳ್ಳುತ್ತೇವೆ. ರಾಜ್ಯದ 500 ಕಡೆ ರೈಲ್ವೆ ಹಳಿಗಳ ಮೇಲೆ ಮಲಗಿ ಪ್ರತಿಭಟನೆ ನಡೆಸುತ್ತೇವೆ. ಅಂದು ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಬರಬಾರದು ಎಂದು ಮನವಿ ಮಾಡುತ್ತೇನೆ ಎಂದರು.

ಶಿವಕುಮಾರ ಸ್ವಾಮೀಜಿ ನಿಧನ ಹೊಂದಿದ ದಿನ ನಾನು ಇಲ್ಲಿಗೆ ಬಂದಿದ್ದೆ. ಆಗ ನನಗೆ ಅನ್ನಿಸಿತು. ಸಿದ್ಧಗಂಗಾ ಮಠಕ್ಕೆ ಸಾವಿರಾರು ರಾಜಕೀಯ ನಾಯಕರು, ಗಣ್ಯರು ಬಂದು ಹೋಗಿದ್ದಾರೆ ಆದರೆ ಅವರು ಯಾರಿಗೂ ಸಿದ್ದಗಂಗಾ ಮಠದ ಬಳಿ ರೈಲ್ವೆ ಮೇಲ್ಸೇತುವೆ ಮಾಡಬೇಕು ಎಂದು ಅನ್ನಿಸಲಿಲ್ಲ. ನಾನು ಈ ಬಗ್ಗೆ ಹೋರಾಟ ನಡೆಸಿದ ಪರಿಣಾಮ ಸೇತುವೆ ನಿರ್ಮಾಣವಾಯಿತು. ಇದು ಖುಷಿಯ ವಿಚಾರ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.