ADVERTISEMENT

ತುಮಕೂರು | ಸಿದ್ಧಗಂಗೆಯಲ್ಲಿ ರಥೋತ್ಸವ ಸಂಭ್ರಮ

ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:37 IST
Last Updated 17 ಫೆಬ್ರುವರಿ 2026, 5:37 IST
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸೋಮವಾರ ಸಿದ್ಧಲಿಂಗೇಶ್ವರ ಸ್ವಾಮಿಯ ರಥೋತ್ಸವ ನೆರವೇರಿತು. ಸ್ವಾಮೀಜಿಗಳು, ಪ್ರಮುಖರು ಭಾಗವಹಿಸಿದ್ದರು
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸೋಮವಾರ ಸಿದ್ಧಲಿಂಗೇಶ್ವರ ಸ್ವಾಮಿಯ ರಥೋತ್ಸವ ನೆರವೇರಿತು. ಸ್ವಾಮೀಜಿಗಳು, ಪ್ರಮುಖರು ಭಾಗವಹಿಸಿದ್ದರು   

ನಗರ, ಜಿಲ್ಲೆಯಷ್ಟೇ ಅಲ್ಲದೆ ನಾಡಿನ ವಿವಿಧೆಡೆಗಳಿಂದ ಬಂದಿದ್ದ ಮಠದ ಭಕ್ತರು ರಥವನ್ನು ಎಳೆದು, ನಮಿಸಿದರು. ತಮ್ಮ ಸ್ವಾಮಿಯನ್ನು ಕಣ್ತುಂಬಿಕೊಂಡು, ಭಕ್ತಿ ಪರವಶರಾದರು. ಕೈ ಮುಗಿದು, ಕಾಯಿ ಒಡೆದು, ಬಾಳೆ ಹಣ್ಣು, ಹೂವು, ದವನ ಸಮರ್ಪಿಸಿ ಕೃತಾರ್ಥರಾದರು. ನವ ಜೋಡಿಗಳು ದವನ ಎಸೆದು, ಹರಕೆ ತೀರಿಸಿ, ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಬೇಡಿಕೊಂಡರು.

ಸಿದ್ಧಲಿಂಗೇಶ್ವರ ಸ್ವಾಮಿ ಹಾಗೂ ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಸ್ಮರಣೆಗಳು ಮೊಳಗಿದವು. ಅಕ್ಷರ ಕಲಿಸಿ, ಅನ್ನ, ಆಶ್ರಯ ನೀಡಿ ಪೋಷಿಸಿದ ಗುರುವನ್ನು ನೆನಪು ಮಾಡಿಕೊಂಡರು.

ಸಿದ್ಧಗಂಗಾ ಮಠದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದ ನಂತರ ರಥಕ್ಕೆ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಃ, ಕಳಸಗಳ ಆರಾಧನೆ, ರಥಾಂಗ ಪೂಜೆ ಸಲ್ಲಿಸಲಾಯಿತು. ಕ್ಷೇತ್ರದ ಆರಾಧ್ಯ ದೈವ ಸಿದ್ಧಲಿಂಗೇಶ್ವರ ಸ್ವಾಮಿಯನ್ನು ರಥಕ್ಕೆ ಕೂರಿಸಿ ರಾಜೋಪಚಾರ ಹಾಗೂ ಅಷ್ಟೋತ್ತರ ಪೂಜೆ ನೆರವೇರಿಸಲಾಯಿತು. ರಥದ ಮುಂಭಾಗದಲ್ಲಿ ಜಯಾದಿ ಹೋಮ, ಗಣ ಹೋಮ, ಮೃತ್ಯುಂಜಯ ಹೋಮ ನಡೆಯಿತು.

ADVERTISEMENT

ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಶುಭ ಅಭಿಜಿನ್ ಲಗ್ನದಲ್ಲಿ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಕಿರಿಯ ಸ್ವಾಮೀಜಿ ಶಿವಸಿದ್ಧೇಶ್ವರ ಸ್ವಾಮೀಜಿ ನೆರವಾದರು. ರಥದ ಗಾಲಿಗೆ ತೆಂಗಿನ ಕಾಯಿ ಒಡೆದು, ಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ರಥೋತ್ಸವ ವಿಧ್ಯುಕ್ತ ಚಾಲನೆ ಪಡೆದುಕೊಂಡಿತು.

ರಥವನ್ನು ಅಭೂತಪೂರ್ಣ ವಸ್ತ್ರಗಳು, ಸುವರ್ಣ ಕಲಶಗಳು, ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ಹಾಗೂ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು. ರಥ ಸಾಗಿದ ಮಾರ್ಗದುದ್ದಕ್ಕೂ ನಂದಿಧ್ವಜ, ಕರಡಿ ಮಜಲು, ನಾದಸ್ವರ, ವೀರಗಾಸೆ, ಪಟ ಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಆಕರ್ಷಿಸಿದವು.

ಪ್ರತಿ ವರ್ಷವೂ ಸಂಪ್ರದಾಯದಂತೆ ಶಿವರಾತ್ರಿ ಹಬ್ಬದ ಮರುದಿನ ರಥೋತ್ಸವ ನೆರವೇರುತ್ತದೆ. ಈ ಆಚರಣೆ ಹಲವು ದಶಕಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಮಠದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಚಟುವಟಿಕೆಗಳು ಒಂದು ವಾರದಿಂದಲೇ ಆರಂಭವಾಗುತ್ತವೆ. ಈ ಸಮಯದಲ್ಲಿ ದನಗಳ ಜಾತ್ರೆ ನಡೆಯುವುದು ವಿಶೇಷ. ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುತ್ತದೆ.

ಶಿವರಾತ್ರಿಯ ದಿನ ಸಾಕಷ್ಟು ಸಂಖ್ಯೆಯ ಭಕ್ತರು ಮಠಕ್ಕೆ ಬರುತ್ತಾರೆ. ಮಠದ ಹಳೆಯ ವಿದ್ಯಾರ್ಥಿಗಳು, ಅವರ ಪೋಷಕರೂ ಮಠಕ್ಕೆ ಆಗಮಿಸುತ್ತಾರೆ. ವಿವಿಧ ಮಠಾಧೀಶರು, ನಗರದ ಭಕ್ತರು ಜತೆಯಾಗುತ್ತಾರೆ. ಎಲ್ಲರೂ ಶಿವರಾತ್ರಿ ಜಾಗರಣೆಯಲ್ಲಿ ಭಾಗವಹಿಸಿ, ಮರು ದಿನ ಬೆಳಿಗ್ಗೆ ನಡೆಯುವ ರಥೋತ್ಸವ ಸಾಕ್ಷೀಕರಿಸುತ್ತಾರೆ. ಸ್ವಾಮಿಯ ಆಶೀರ್ವಾದ ಪಡೆದು, ತಮ್ಮ ಬೇಡಿಕೆ ಸಲ್ಲಿಸಿ ಮನೆಗಳತ್ತ ತೆರಳುತ್ತಾರೆ.

ರಥೋತ್ಸವದ ಸಂದರ್ಭದಲ್ಲಿ ಬಂದಿದ್ದ ಭಕ್ತಾದಿಗಳಿಗೆ ಸಂಘ, ಸಂಸ್ಥೆಗಳಿಂದ ಪಾನಕ, ಮಜ್ಜಿಗೆ ವಿತರಿಸಲಾಯಿತು. ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕಲಾತಂಡಗಳ ಮೆರುಗು
ಕಲಾತಂಡಗಳ ಮೆರುಗು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.