
ತುಮಕೂರು: ಸಬ್ಸಿಡಿ ರೂಪದಲ್ಲಿ ಸಾಲ ನೀಡುವುದಾಗಿ ಜನರಿಗೆ ವಂಚಿಸುತ್ತಿದ್ದ ಜಾಲವನ್ನು ನಗರದ ಸೈಬರ್ ಠಾಣೆ ಪೊಲೀಸರು ಬೇಧಿಸಿದ್ದಾರೆ. ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ದೇಶದ ವಿವಿಧೆಡೆ ನಡೆದ ಸೈಬರ್ ವಂಚನೆ ಪ್ರಕರಣಗಳಿಗೆ ಕೊರಟಗೆರೆ ತಾಲ್ಲೂಕಿನ ತೀತಾ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ಖಾತೆ (12162100011623) ಬಳಸುತ್ತಿರುವುದು ಗೊತ್ತಾಗಿದೆ. ಖಾತೆಯ ಬಳಕೆದಾರ ಸೇರಿ ಇಬ್ಬರು ಆರೋಪಿಗಳನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಬ್ಬ ಆರೋಪಿ ತುಮಕೂರು, ಮತ್ತೊಬ್ಬ ಬೆಂಗಳೂರಿನವರು.
ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹೆಸರಿನಲ್ಲಿ ಜನರನ್ನು ಸಂಪರ್ಕಿಸುತ್ತಿದ್ದರು. ಬೆಂಗಳೂರಿನ ವ್ಯಕ್ತಿ ಸಾವಿರಾರು ಜನರ ಮೊಬೈಲ್ ಸಂಖ್ಯೆಗಳನ್ನು ನೀಡುತ್ತಿದ್ದರು. ತುಮಕೂರಿನ ಆರೋಪಿ ಅದರಲ್ಲಿನ ಸಂಖ್ಯೆ ಸಂಪರ್ಕಿಸಿ, ಸಾಲ ನೀಡುವುದಾಗಿ ಆಮಿಷ ಒಡ್ಡುತ್ತಿದ್ದರು. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಒಂದೇ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದರು. ಈ ಖಾತೆಯ ವಿರುದ್ಧ ರಾಜ್ಯದ ವಿವಿಧ ಜಿಲ್ಲೆ, ಅನ್ಯ ರಾಜ್ಯದ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿವೆ.
ಜನರಿಗೆ ಆರೋಪಿಗಳು ಕರೆ ಮಾಡಿ, ‘ಸಾಲ ಮಂಜೂರು ಮಾಡಲಾಗಿದೆ’ ಎಂದು ನಂಬಿಸುತ್ತಿದ್ದರು. ಸಾಲ ಪಾವತಿ ಪ್ರಕ್ರಿಯೆ ಮುಂದುವರಿಸಲು ಶುಲ್ಕ, ವಿಮಾ ಮೊತ್ತ ಹೀಗೆ ವಿವಿಧ ಕಾರಣ ಹೇಳಿ ಹಣ ಪಡೆಯುತ್ತಿದ್ದರು. ನಂತರ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಹಲವು ಕಡೆಗಳಲ್ಲಿ ಇದೇ ರೀತಿ ಮಾಡಿದ್ದಾರೆ.
‘ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ’ ಎಂದು ಆರೋಪಿಗಳು ಹೇಳುತ್ತಿದ್ದಾರೆ. ಇನ್ನೂ ಹಣದ ಬಗ್ಗೆ ಖಚಿತಪಟ್ಟಿಲ್ಲ. ಹೆಚ್ಚಿನ ಪ್ರಮಾಣದ ವಂಚನೆ ಆಗಿರಬಹುದು ಎಂಬ ಅನುಮಾನಗಳಿವೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳ ಸಂಖ್ಯೆ ಹೆಚ್ಚಾಗಬಹುದು. ಬೇರೆ ರಾಜ್ಯದವರು ಇದರಲ್ಲಿ ಭಾಗಿಯಾದ ಬಗ್ಗೆ ಸುಳಿವು ಸಿಕ್ಕಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಟೆಲಿ ಕಾಲರ್ ಬಳಕೆ
ಆರೋಪಿಗಳು ಸಾಲದ ಬಗ್ಗೆ ಜನರಿಗೆ ತಿಳಿಸಲು ಮಹಿಳೆಯರನ್ನು ನೇಮಿಸಿಕೊಂಡಿದ್ದರು. ಮಹಿಳೆಯರು ಟೆಲಿ ಕಾಲರ್‌ಗಳಂತೆ ಮಾತನಾಡುತ್ತಿದ್ದರು. ಬ್ಯಾಂಕ್‌ಗಳಿಂದ ಕರೆ ಮಾಡಿರುವುದಾಗಿ ತಿಳಿಸುತ್ತಿದ್ದರು. ಜನ ಸಾಲ ಪಡೆಯಲು ಒಪ್ಪಿದಾಗ ಆರೋಪಿಗಳು ಮೊಬೈಲ್‌ನಲ್ಲಿ ಎಲ್ಲ ಮಾಹಿತಿ ಹಂಚಿಕೊಳ್ಳುತ್ತಿದ್ದರು. ‘ಸುಳ್ಳು ಕರೆಗಳಿಗೆ ಸ್ಪಂದಿಸಿ ನೂರಾರು ಜನ ಹಣ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಇದೆ. ತನಿಖೆ ನಂತರ ಮತ್ತಷ್ಟು ವಿವರ ಸಿಗಲಿದೆ. ಇದೊಂದು ಚೈನ್ ಲಿಂಕ್ ರೀತಿ ಕೆಲಸ ಮಾಡಿದಂತಿದೆ. ಒಬ್ಬರಿಂದ ಒಬ್ಬರು ಸಂಪರ್ಕ ಪಡೆದು ವಂಚನೆ ಜಾಲವನ್ನು ಕಟ್ಟಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಲಾಭದ ಆಮಿಷ: ₹16.81 ಲಕ್ಷ ವಂಚನೆ
ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಕುವೆಂಪು ನಗರದ ಬಿ.ಎಸ್.ಉಮೇಶ್ ಎಂಬುವರು ₹16.81 ಲಕ್ಷ ಕಳೆದುಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ‘HDFC Securities 25+Years Powering India's Investments’ ಎಂಬ ಜಾಹೀರಾತು ಕ್ಲಿಕ್ ಮಾಡಿದ್ದಾರೆ. ನಂತರ ಅವರ ವಾಟ್ಸ್ ಆ್ಯಪ್ ಗ್ರೂಪ್‌ಗೆ ಮೊಬೈಲ್ ನಂಬರ್ ಸೇರಿಸಲಾಗಿದೆ. ಸದರಿ ಗ್ರೂಪ್‌ನಲ್ಲಿ ‘ಎಚ್‌ಡಿಎಫ್‌ಸಿ ಸೆಕ್ಯೂರಿಟಿಸ್’ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ತಿಳಿಸಿದ್ದಾರೆ.
‘https://main.hdfcsecsuperb.com’ ಲಿಂಕ್‌ನಲ್ಲಿ ಹಣ ಹೂಡಿಕೆ ಬಗ್ಗೆ ಹೇಳಿದ್ದಾರೆ. ಇದನ್ನು ನಂಬಿದ ಉಮೇಶ್ ಹಂತ ಹಂತವಾಗಿ ಒಟ್ಟು ₹1681030 ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರಿಗೆ ಯಾವುದೇ ಹಣ ವಾಪಸ್ ಹಾಕಿಲ್ಲ. ಇನ್ನೂ ಹೆಚ್ಚಿಗೆ ಹೂಡಿಕೆ ಮಾಡಿದರೆ ಮಾತ್ರ ಪೂರ್ತಿ ಹಣ ವಾಪಸ್ ನೀಡಲಾಗುವುದು ಎಂದಿದ್ದಾರೆ. ಇದರಿಂದ ಅನುಮಾನ ಬಂದು ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಹಣ ವಾಪಸ್ ಕೊಡಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.