
ತುಮಕೂರು: ‘ಭೀಮಣ್ಣ ಖಂಡ್ರೆ ಅವಿಸ್ಮರಣೀಯ ಸಮಾಜಮುಖಿ ವ್ಯಕ್ತಿತ್ವದ ಮೇರು ಪರ್ವತ’ ಎಂದು ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಪರಮೇಶ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳವಳಿಯ ನೇತಾರರಾಗಿ, ಹೈದರಾಬಾದ್ ಕರ್ನಾಟಕದ ಸಮಗ್ರ ಬೆಳವಣಿಗೆಗೆ ಶ್ರಮಿಸಿದ್ದಾರೆ. ಮಹಾಸಭಾ ಅಧ್ಯಕ್ಷರಾಗಿ ಮಾಡಿರುವ ಸಾಧನೆ ಅವಿಸ್ಮರಣೀಯ ಎಂದು ಬಣ್ಣಿಸಿದರು.
ಮಹಾಸಭಾ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮಹಾಸಭೆ ಆಡಳಿತ ಕಚೇರಿ ಕಟ್ಟಡ ಕೆಲಸ ಮುಗಿಯುವವರೆಗೂ ದ್ರವಾಹಾರ ಸೇವಿಸುವ ಶಪಥ ಮಾಡಿದ್ದರು. ಸಂಸ್ಥೆಗೆ ಶಾಶ್ವತವಾದ ಕಟ್ಟಡ ಕಟ್ಟುವ ಮೂಲಕ ಮಾಡಿದ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿ, ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು.
ಮಹಾಸಭಾ ಮಹಾನಗರ ಪಾಲಿಕೆ ಘಟಕದ ಅಧ್ಯಕ್ಷ ಕೆ.ಎಸ್.ಉಮಾಮಹೇಶ್, ‘ಖಂಡ್ರೆ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸಮಾಜಕ್ಕೆ ತೊಂದರೆಯಾದ ಸಂದರ್ಭದಲ್ಲಿ ಸಿಡಿದೆದ್ದು ಹೋರಾಟ ಮಾಡುತ್ತಿದ್ದರು. ಹಾವನೂರು ವರದಿ ಲಿಂಗಾಯತ ವಿರೋಧಿಯೆಂದು ವಾದಿಸಿ ವಿಧಾನಸಭೆಯಲ್ಲಿ ವರದಿ ಪ್ರತಿಯನ್ನು ಹರಿದುಹಾಕಿ ಪ್ರತಿಭಟಿಸುವ ಎದೆಗಾರಿಕೆ ತೋರಿದ್ದರು’ ಎಂದು ನೆನಪಿಸಿಕೊಂಡರು.
ಮಹಾಸಭೆ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ದಿವಾಕರ್, ನಗರ ಘಟಕದ ಅಧ್ಯಕ್ಷೆ ಪುಷ್ಪಾ ಉದಯ್, ಪದಾಧಿಕಾರಿಗಳಾದ ಎಚ್.ಜಿ.ಸದಾಶಿವಯ್ಯ, ಧರ್ಮಪಾಲ್, ಟಿ.ಎಂ.ವಿಜಯಕುಮಾರ್, ಬಿ.ರಾಜಶೇಖರಯ್ಯ, ಮನು, ನಟರಾಜು, ಶಾಂತ ಉಮೇಶ್, ರಶ್ಮಿ, ಮಮತಾ ಪ್ರಸನ್ನ ಮೊದಲಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.