ಕುಣಿಗಲ್: ‘ಲಿಂಕ್ ಕೆನಾಲ್ ಅವೈಜ್ಞಾನಿಕವಾದ, ದುಡ್ಡು ಹೊಡೆಯುವ ಯೋಜನೆಯಾಗಿದೆ. ಇದರಿಂದ ತಾಲ್ಲೂಕಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು’ ಎಂದು ಕಾಂಗ್ರೆಸ್ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿ ಗೌಡ ಆರೋಪಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ನಡೆದ ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆ ಅನುಷ್ಠಾನದ ಚರ್ಚೆಯಲ್ಲಿ ಮಾತನಾಡಿದರು.
ಲಿಂಕ್ ಕೆನಾಲ್ ಯೋಜನೆ ಅನುಷ್ಠಾನದಿಂದ ಪೈಪ್‌ಲೈನ್ ನಿರ್ಮಾಣವಾಗುತ್ತದೆ ಹೊರತು ತಾಲ್ಲೂಕಿಗೆ ನೀರು ಹರಿಯುವುದು ಕನಸಿನ ಮಾತು. ತಾಲ್ಲೂಕಿನ ನೀರಾವರಿ ಸಮಸ್ಯೆಗಳು ಬಗೆಹರಿಯಬೇಕಾದರೆ ಮೊದಲು ಕುಣಿಗಲ್ ದೊಡ್ಡಕೆರೆ ನೀರಿನ ಬಗ್ಗೆ ಗಮನಹರಿಸಬೇಕಿದೆ ಎಂದರು.
ದೊಡ್ಡಕೆರೆಗೆ ಹರಿದು ಬಂದಿರುವ ಹೇಮಾವತಿ ನೀರನ್ನು ಪಟ್ಟಣಕ್ಕೆ ಕುಡಿಯುವ ನೀರಿಗೆ ಮೀಸಲಿಟ್ಟಿರುವುದು ಸಹ ಅವೈಜ್ಞಾನಿಕ. ದೊಡ್ಡಕೆರೆಯಲ್ಲಿ ಸಂಗ್ರಹವಾಗಿರುವ ಶೇ 2ರಷ್ಟು ನೀರನ್ನು ಕುಡಿಯುವುದಕ್ಕೆ ಬಳಸಿಕೊಂಡು ಉಳಿಕೆ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಬೇಕಿದೆ. ಆದರೆ ರಾಜಕೀಯ ಉದ್ದೇಶದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಹದಿನೈದು ವರ್ಷಗಳಿಂದ ನೀರು ನೀಡಿಲ್ಲ. ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನೀಡುವ ಜತೆಗೆ ಸಂಪರ್ಕ ಕಾಲುವೆ ವ್ಯಾಪ್ತಿಗೆ ವಿತರಣೆ ನಾಲೆ– 26 ಸೇರಿಸುವುದು ಮತ್ತು ಬೇಗೂರು ಕೆರೆಯಿಂದ 240 ಕಿ.ಮೀ ನಾಲಾವಲಯ ನಿರ್ಮಾಣಕ್ಕೆ ಸೇರಿಸಿದಾಗ ಮಾತ್ರ ತಾಲ್ಲೂಕಿನ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ತಿಳಿಸಿದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಲಿಂಕ್ ಕೆನಾಲ್ ಯೋಜನೆಗೆ ಯಾರದ್ದೂ ಅಡ್ಡಿ ಇಲ್ಲ, ಆದರೆ ತಾಲ್ಲೂಕಿನ ಪಾಲಿನ ಹೇಮಾವತಿ ನೀರನ್ನು ಹರಿಸದೆ ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗುವುದಕ್ಕೆ ವಿರೋಧವಿದೆ. ಶಾಸಕರು, ಹೇಮಾವತಿ ನಾಲಾ ಅಭಿವೃದ್ಧಿಗಾಗಿ ಇದ್ದ ₹80 ಕೋಟಿಯನ್ನು ನಾಲಾವಲಯದ ರಸ್ತೆಗಳಿಗೆ ಬಳಕೆ ಮಾಡುವುದರ ಮೂಲಕ ಅನ್ಯಾಯ ಮಾಡಿದ್ದಾರೆ. ರಾಮನಗರ ಜಿಲ್ಲೆಗೆ ನೀರು ಹರಿಸಲು ಕಡಿಮೆ ವೆಚ್ಚದಲ್ಲಿ ಬೇರೆ ಮೂಲಗಳಿದ್ದರೂ, ಬಳಕೆ ಮಾಡಿಕೊಳ್ಳುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇವರ ನಿರ್ಣಯದಿಂದ ತಾಲ್ಲೂಕಿನ 30 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ನೀರಿನಿಂದ ವಂಚಿತವಾಗಿದೆ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಂ, ಕಸಾಪ ಅಧ್ಯಕ್ಷ ಕಪನಿಪಾಳ್ಯ ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರಾಮಯ್ಯ, ರೋಟರಿ ಕ್ಲಬ್ ಅಧ್ಯಕ್ಷ ಹುಚ್ಚೆಗೌಡ, ಮುಖಂಡರಾದ ವರದರಾಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್, ಜಿ.ಕೆ.ನಾಗಣ್ಣ , ವಕೀಲರ ಸಂಘದ ಮಾಜಿ ಅಧ್ಯಕ್ಷ ಬಾಬು ಹಾಜರಿದ್ದರು.
₹300 ಕೋಟಿಯಲ್ಲಿ ಸಮೃದ್ಧ ನೀರು ಸಾಧ್ಯ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ಮಾತನಾಡಿ ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಕೇವಲ 300 ಕೋಟಿ ವೆಚ್ಚ ಮಾಡಿದರೆ ಸಮೃದ್ಧವಾಗಿ ನೀರು ಪಡೆಯಬಹುದು. ಆದರೆ ಸಂಪರ್ಕ ಕಾಲುವೆಗಾಗಿ ಒಂದು ಸಾವಿರ ಕೋಟಿ ನಾಲಾ ಆಧುನಿಕರಣಕ್ಕೆ ₹800 ಕೋಟಿ ಶ್ರೀರಂಗ ಏತ ನೀರಾವರಿ ಯೋಜನೆಗೆ ₹550 ಕೋಟಿ ವೆಚ್ಚ ಮಾಡಿತ್ತಿದ್ದರೂ ನೀರು ಹರಿಯುವುದು ಅನುಮಾನ ಎಂದರು. ಮಾಗಡಿ ತಾಲ್ಲೂಕಿಗೆ ಅರ್ಕಾವತಿ ವೈ.ಜಿ.ಗುಡ್ಡ ವೃಷಭಾವತಿ ನಾಲೆಗಳಿಂದ ಕಡಿಮೆ ವೆಚ್ಚದಲ್ಲಿ 40 ಕಿ.ಮೀ ವ್ಯಾಪ್ತಿಯಿಂದ ನಿರಂತರವಾಗಿ ನೀರು ಹರಿಸಬಹುದು. 150 ಕಿ.ಮೀ ದೂರದ ಹೇಮಾವತಿ ನಾಲೆಯಿಂದ ವರ್ಷಕ್ಕೆ ಕೇವಲ 40 ದಿನ ಹರಿಯುವ ನೀರನ್ನು ಹರಿಸುವ ಕಾರ್ಯ ಬೇಕಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.