ತುಮಕೂರು: ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ವಿರೋಧಿಸಿ, ಕಾನೂನು ಸಂಹಿತೆಗಳನ್ನು ವಾಪಸ್ ಪಡೆಯಬೇಕು ಎಂಬುದು ಸೇರಿದಂತೆ ವಿವಿಧ 21 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಬುಧವಾರ ಕಾರ್ಮಿಕರು, ನೌಕರರು ಪ್ರತಿಭಟನೆ ನಡೆಸಿದರು.
ಸಿಐಟಿಯು, ಜೆಸಿಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿತ್ತು. ಇದರ ಭಾಗವಾಗಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ನಗರದ ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ನಂತರ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಕಚೇರಿಗೆ ನುಗ್ಗಲು ಯತ್ನಿಸಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು.
ವಿವಿಧ ಕಾರ್ಖಾನೆಗಳ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮುನ್ಸಿಪಲ್, ಕಟ್ಟಡ, ರಸ್ತೆ ಬದಿ ವ್ಯಾಪಾರಿಗಳು, ಹಾಸ್ಟೆಲ್ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವಸಂತನರಸಾಪುರ, ಅಂತರಸನಹಳ್ಳಿ, ಸತ್ಯಮಂಗಲ, ಹಿರೇಹಳ್ಳಿ ಕೈಗಾರಿಕಾ ಪ್ರದೇಶಗಳ ಕಾರ್ಮಿಕರು ಬೈಕ್ ರ‍್ಯಾಲಿ ನಡೆಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಎಐಟಿಯುಸಿ ಮುಖಂಡ ಕಂಬೇಗೌಡ ಮಾತನಾಡಿ, ‘ಅನ್ನದಾತ, ಸಂಪತ್ತು ಸೃಷ್ಟಿಸುವ ಕಾರ್ಮಿಕ ವಿರೋಧಿ ನೀತಿಗಳನ್ನು ಸರ್ಕಾರ ಕೈಬಿಡಬೇಕು. ಕಾರ್ಪೋರೇಟ್ ಬಂಡವಾಳಶಾಹಿಗಳ ಪರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಪ್ರತಿಭಟನೆ, ಚಳವಳಿಗಳನ್ನು ಭಾರತೀಯ ನ್ಯಾಯ ಸಂಹಿತೆ ನಿಯಮ 111ರ ಅಡಿಯಲ್ಲಿ ಸಂಘಟಿತ ಅಪರಾಧದ ವ್ಯಾಪ್ತಿಗೆ ತರಲಾಗಿದೆ. ಹೋರಾಟಗಾರರಿಗೆ ಜಾಮೀನು ಸಿಗದಂತೆ ಮಾಡಿ ಜೈಲಿಗೆ ತಳ್ಳುವ ಹುನ್ನಾರ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐಎನ್‌ಟಿಯುಸಿ ಮುಖಂಡ ಗೋವಿಂದರಾಜು, ‘ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುತ್ತಿಲ್ಲ. ದುಡಿಯುವ ಜನರ ವಿರೋಧಿಯಾಗಿದೆ’ ಎಂದು ಟೀಕಿಸಿದರು.
ಎಐಯುಟಿಯುಸಿ ಮುಖಂಡರಾದ ಮಂಜುಳ ಗೋನಾವರ, ‘ಸ್ಕೀಮ್ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಮಹಿಳೆಯರನ್ನು ರಾತ್ರಿಪಾಳಿ, ಅಪಾಯಕಾರಿ ಕೆಲಸಗಳಿಗೆ ನಿಯೋಜಿಸಬಾರದು’ ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ವಿವಿಧ ಸಂಘಟನೆಗಳ ಮುಖಂಡರಾದ ಸ್ವಾಮಿ, ಷಣ್ಮಖಪ್ಪ, ರಂಗಧಾಮಯ್ಯ, ಗಿರೀಶ್, ಗೌರಮ್ಮ, ಗಂಗಾ, ಜಬೀನಾ ಖಾತೋನ್, ವಾಸಿಂಅಕ್ರಂ, ರವಿ, ಮುತ್ತುರಾಜ್, ನಾಗರಾಜು, ಕಲಿಲ್, ಶಂಕರಪ್ಪ, ಶಹತಾಜ್, ಮಾರುತಿ, ಮಂಜುನಾಥ್, ಪ್ರಕಾಶ್, ಕುಮಾರ್, ಸುಜೀತ್ ನಾಯಕ್, ರಮೇಶ್, ಶಿವಕುಮಾರಸ್ವಾಮಿ, ಉಮೇಶ್, ಶಶಿಕಿರಣ್, ಗಣಪತಿ, ಸ್ಟಾಲಿ ಸುಕುಮಾರ್, ಚಂದ್ರಮೌಳಿ, ಯತೀಶ್, ಮಧುಸೂದನ್, ಕಾಂತರಾಜು, ಟಿ.ಆರ್.ಕಲ್ಪನಾ, ಚಂದ್ರಶೇಖರ್, ಬಸವರಾಜು, ಲಕ್ಷ್ಮಿಪತಿ, ಜಾಫರ್ ಶರೀಫ್, ವಂಕಟೇಶ್ ಪಾಲ್ಗೊಂಡಿದ್ದರು.
ಪ್ರಮುಖ ಬೇಡಿಕೆಗಳು
* ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಳ ಮಾಡಬಾರದು
* ಸಾರ್ವಜನಿಕ ವಲಯದ ಆಸ್ತಿಗಳ ಮಾರಾಟ ನಿಲ್ಲಿಸಬೇಕು
* ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು * ಉದ್ಯೋಗ ಸೃಷ್ಟಿ ಮಾಡುವುದರ ಜತೆಗೆ ಕನಿಷ್ಠ ಕೂಲಿಯನ್ನು ಮಾಸಿಕ ₹36000ಕ್ಕೆ ಹೆಚ್ಚಿಸಬೇಕು. ಮಾಸಿಕ ಪಿಂಚಣಿಯನ್ನು ₹9 ಸಾವಿರಕ್ಕೆ ನಿಗದಿಪಡಿಸಬೇಕು
* ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಬೇಕು. ಅಸಂಘಟಿತ ಕಾರ್ಮಿಕರು ಸ್ಕೀಂ ನೌಕರರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು
* ಬಲವಂತದ ಭೂ ಸ್ವಾಧೀನ ನಿಲ್ಲಿಸಬೇಕು. ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು
* ವಿದ್ಯುತ್ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಬಾರದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.