ADVERTISEMENT

ಉಳ್ಳವರ ಕೇಂದ್ರಗಳಾದ ವಿಶ್ವವಿದ್ಯಾಲಯಗಳು

ರಾಷ್ಟ್ರೀಯ ಶಿಕ್ಷಣ ನೀತಿ 2019 ವಿಭಾಗೀಯ ಮಟ್ಟದ ಅಧ್ಯಯನ ಶಿಬಿರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 13:21 IST
Last Updated 16 ಜುಲೈ 2019, 13:21 IST
ತಮಟೆ ಬಾರಿಸುವ ಮೂಲಕ ದೊರೈರಾಜ್ ಅವರು ರಾಷ್ಟ್ರೀಯ ಶಿಕ್ಷಣ ನೀತಿ-2019ರ ವಿಭಾಗೀಯ ಮಟ್ಟದ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಿದರು
ತಮಟೆ ಬಾರಿಸುವ ಮೂಲಕ ದೊರೈರಾಜ್ ಅವರು ರಾಷ್ಟ್ರೀಯ ಶಿಕ್ಷಣ ನೀತಿ-2019ರ ವಿಭಾಗೀಯ ಮಟ್ಟದ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಿದರು   

ತುಮಕೂರು: ಭಾರತದಲ್ಲಿ ಉನ್ನತ ಶಿಕ್ಷಣ ನೀಡಲು 830 ವಿಶ್ವವಿದ್ಯಾಲಯಗಳಿವೆ. ಇಲ್ಲಿನ ಶಿಕ್ಷಣ ಉಳ್ಳವರಿಗೆ ಮಾತ್ರ ದೊರಕುತ್ತಿದೆ ಎಂದು ಸಮಾನ ಶಿಕ್ಷಣ ಆಂದೋಲನ ಸಂಚಾಲಕ ಶ್ರೀಪಾದ್‌ಭಟ್ ನುಡಿದರು.

ನಗರದಲ್ಲಿ ಸ್ಲಂ ಜನಾಂದೋಲನಾ ಕರ್ನಾಟಕ ಮತ್ತು ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಚಲಿತ ವಿಷಯಗಳು ಮತ್ತು ಸಂಘಟನೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ-2019ರ ವಿಭಾಗೀಯ ಮಟ್ಟದ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು.

ದೇಶದಲ್ಲಿ ವಾರ್ಷಿಕವಾಗಿ 25 ಕೋಟಿ ಮಕ್ಕಳು ಶಾಲೆಗೆ ದಾಖಲಾದರೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರು 5 ಕೋಟಿ ಮಾತ್ರ. ಇವರಲ್ಲಿ ಶೇ 11ರಷ್ಟು ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಇದ್ದಾರೆ. ಶೇ 25 ರಷ್ಟು ಒಬಿಸಿ, ಎಂಬಿಸಿ ಹಾಗೂ ಶೇ 6ರಷ್ಟು ಅಲ್ಪಸಂಖ್ಯಾತರು ಪ್ರವೇಶ ಪಡೆಯುತ್ತಿದ್ದಾರೆ. ಇದರಿಂದ 20 ಕೋಟಿ ಯುವಜನರು ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಇದು ಭಾರತದಲ್ಲಿ ಶಿಕ್ಷಣದ ಭೀಕರತೆ ತೆರೆದಿಡುತ್ತದೆ ಎಂದು ವಿಶ್ಲೇಷಿಸಿದರು.

ADVERTISEMENT

2017ರಲ್ಲಿ ಕಸ್ತೂರಿ ರಂಗನ್ ನೇತೃತ್ವದ ಶಿಕ್ಷಣ ನೀತಿ ರೂಪಿಸಲು ಎನ್‌ಡಿಎ ಸರ್ಕಾರ ಮುಂದಾಗಿತ್ತು. 2019ರಲ್ಲಿ ವರದಿ ಸಲ್ಲಿಸಲಾಗಿದೆ. ಈ ವರದಿಯಲ್ಲಿ ಶಿಕ್ಷಕರು, ಪ್ರಾಧ್ಯಾಪಕರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ತೆಗೆದುಕೊಂಡಿಲ್ಲ. 29 ರಾಜ್ಯಗಳಲ್ಲಿ ಈ ಬಗ್ಗೆ ಚರ್ಚೆ ನಡೆಸದೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಕಟಿಸಿ ಜುಲೈ 30ಕ್ಕೆ ಪ್ರತಿಕ್ರಿಯಿಸಲು ಕಾಲಾವ‌ಕಾಶ ನೀಡಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿಗಾಮಿ ಅಂಶಗಳಿವೆ. ಸಂವಿಧಾನದ ಆಶಯಗಳನ್ನು ಒಳಗೊಂಡಿಲ್ಲ. ಶಿಕ್ಷಣವನ್ನು ಒಂದು ವಲಯವನ್ನಾಗಿ ನೋಡಲಾಗುತ್ತಿದೆ. ಸಮಾಜದ ಜತೆಗೆ ನಿರಂತರ ಸಂಬಂಧ ಇಲ್ಲದಂತೆ ರೂಪಿಸಲಾಗಿದೆ ಎಂದು ಹೇಳಿದರು.

ಶಿಕ್ಷಣ ವಿಕೇಂದ್ರೀಕರಣವಾದರೆ ಮಾತ್ರ ವಂಚಿತ ಸಮುದಾಯಗಳಿಗೆ ಶಿಕ್ಷಣ ಪಡೆಯಲು ಸಾಧ್ಯ. ಒಕ್ಕೂಟ ವ್ಯವಸ್ಥೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಅವಶ್ಯಕತೆ ಇಲ್ಲ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ಬಗ್ಗೆ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ವಿಷಯ ಮಂಡಿಸಿದರು.

ಸ್ಲಂ ಜನಾಂದೋಲನಾ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಅಧ್ಯಕ್ಷತೆವಹಿಸಿದ್ದರು. ಕೊಳೆಗೇರಿ ಸಮಿತಿ ಗೌರವಾಧ್ಯಕ್ಷೆ ದೀಪಿಕಾ, ಕಾರ್ಯದರ್ಶಿ ಶೆಟ್ಟಾಳಯ್ಯ, ಸಾವಿತ್ರಿ ಬಾ ಪುಲೆ ಸಂಘಟನೆ ಬೆಂಗಳೂರು ಸಂಚಾಲಕರಾದ ಚಂದ್ರಮ್ಮ, ಸ್ಲಂ ಜನಾಂದೋಲನ ಚಿತ್ರದುರ್ಗ ಸಂಚಾಲಕರಾದ ಕೆ.ಮಂಜಣ್ಣ, ದಾವಣಗೆರೆ ಜಿಲ್ಲಾ ಸಂಚಾಲಕರಾದ ರೇಣುಕಾ ಎಲ್ಲಮ್ಮ ಇದ್ದರು.

****

ಸಿದ್ಧಾಂತಗಳ ವೈರುಧ್ಯ
ಸ್ಲಂಗಳ ಬಗ್ಗೆ ರಾಜಕೀಯ ಪಕ್ಷಗಳು ಕೇಂದ್ರೀಕೃತವಾಗಿವೆ. ಏಕೆಂದರೆ ಬಹುತೇಕವಾಗಿ ಮತ ಚಲಾಯಿಸುವವರು ಸ್ಲಂ ನಿವಾಸಿಗಳೇ. ಆದರೆ ಸ್ಲಂ ಜನರ ಭೂಮಿ ಮತ್ತು ವಸತಿ ಸಮಸ್ಯೆಗಳ ಬಗ್ಗೆ ಪ್ರಭುತ್ವ ರಚನಾತ್ಮಕವಾದ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಕೆ.ದೊರೈರಾಜ್ ದೂರಿದರು.

ಜನರ ಕಲ್ಯಾಣದಲ್ಲಿ ತೊಡಗಿಸಿಕೊಳ್ಳದೆ ದುಡಿಯುವ ಕೈಗೆ ಉದ್ಯೋಗ ನೀಡದೆ ದುಡಿಮೆಗೆ ತಕ್ಕ ಕೂಲಿ ಕೊಡದೆ ಹಸಿವನ್ನು ಹೆಚ್ಚಿಸಲಾಗುತ್ತಿದೆ. ಇಂದು ದೇಶ ಸಿದ್ಧಾಂತಗಳ ವೈರುಧ್ಯದಲ್ಲಿ ಇದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದ್ದು ತಲಾತಲಾಂತರದಿಂದ ರೂಪಿತವಾದ ಶಿಕ್ಷಣ ಪದ್ಧತಿಯನ್ನು ವಂಚಿತ ಸಮುದಾಯಗಳಿಂದ ಕಸಿಯುವ ಹುನ್ನಾರದ ಬಗ್ಗೆ ಸ್ಲಂ ಜನಾಂದೋಲನ ಸಂಘಟನೆಯ ಕಾರ್ಯಕರ್ತರು ಜಾಗೃತರಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.