ADVERTISEMENT

ತುಮಕೂರು|ವಾಯು ಮಾಲಿನ್ಯ ನಿಯಂತ್ರಣ ದಿನ: ಹೆಚ್ಚಿದ ಮಾಲಿನ್ಯ; 11 ಕೈಗಾರಿಕೆಗೆ ಬೀಗ

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 640 ನೋಟಿಸ್‌ ಜಾರಿ; ಸುಧಾರಿಸದ ಗಾಳಿಯ ಗುಣಮಟ್ಟ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:02 IST
Last Updated 2 ಡಿಸೆಂಬರ್ 2025, 7:02 IST
ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಅಕ್ಕಿ ಗಿರಣಿ ಹೊಗೆ
ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಅಕ್ಕಿ ಗಿರಣಿ ಹೊಗೆ   

ತುಮಕೂರು: ವಾತಾವರಣದಲ್ಲಿ ಗಾಳಿಯ ಗುಣಮಟ್ಟ ಜಿಲ್ಲೆಯಲ್ಲೂ ದಿನೇ ದಿನೇ ಕುಸಿತ ಕಾಣುತ್ತಿದ್ದು, ಕಳೆದ ಐದು ವರ್ಷದಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾದ 11 ಕೈಗಾರಿಕೆಗಳಿಗೆ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬೀಗ ಜಡಿಯಲಾಗಿದೆ.

2020–21ನೇ ಸಾಲಿನಿಂದ 2024–25ರ ವರೆಗೆ ಮಂಡಳಿಯಿಂದ ಕೈಗಾರಿಕೆಗಳಿಗೆ ಕಾರಣ ಕೇಳಿ 640 ನೋಟಿಸ್‌ ನೀಡಲಾಗಿದೆ. ಇದೇ ಅವಧಿಯಲ್ಲಿ 56 ಕೈಗಾರಿಕೆಗಳನ್ನು ಮುಚ್ಚುವಂತೆ ಅಂತಿಮ ನೋಟಿಸ್‌ ಕೊಡಲಾಗಿದೆ. ಈ ಪೈಕಿ 11 ಕೈಗಾರಿಕೆಗಳನ್ನು ಮಾತ್ರ ಸಂಪೂರ್ಣವಾಗಿ ಮುಚ್ಚಲಾಗಿದೆ.

ಜಿಲ್ಲೆಯು ಕೈಗಾರಿಕಾ ಹಬ್‌ ಆಗಿ ಬದಲಾಗುತ್ತಿದೆ. ನಗರ ಹೊರವಲಯದ ಕೈಗಾರಿಕಾ ಪ್ರದೇಶಗಳಲ್ಲಿ ನೂರಾರು ಉದ್ದಿಮೆ, ಕಾರ್ಖಾನೆಗಳು ತಲೆ ಎತ್ತುತ್ತಿವೆ. ಇವು ಹೊರ ಸೂಸುವ ಹೊಗೆ, ತ್ಯಾಜ್ಯದಿಂದ ಗಾಳಿ ಕಲುಷಿತವಾಗುತ್ತಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾದ ಕಾರ್ಯ ನಡೆಯುತ್ತಿಲ್ಲ. ಮಂಡಳಿಯಿಂದ ನೋಟಿಸ್‌ ಜಾರಿ ಮಾಡುವುದು ಹೆಚ್ಚಾಗುತ್ತಿದೆ. ಇದನ್ನು ಹೊರೆತುಪಡಿಸಿದರೆ ಕೈಗಾರಿಕೆ ಮಾಲೀಕರ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿಲ್ಲ.

ADVERTISEMENT

ವಸಂತನರಸಾಪುರ, ಅಂತರಸನಹಳ್ಳಿ, ಹಿರೇಹಳ್ಳಿ ಸೇರಿ ಸುತ್ತಮುತ್ತಲಿನ ಭಾಗದಲ್ಲಿ ಕೈಗಾರಿಕೆಗಳ ಆರಂಭಕ್ಕೆ ಸಾವಿರಾರು ಎಕರೆ ಕಾಯ್ದಿರಿಸಲಾಗಿದೆ. ಇಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೈಗಾರಿಕೆಗಳು ಶುರುವಾಗಿಲ್ಲ. ಈಗಾಗಲೇ ಕಾರ್ಯಾರಂಭ ಮಾಡಿದ ಕೈಗಾರಿಕೆ, ಉದ್ದಿಮೆಗಳು ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಿಲ್ಲ. ನಗರದ ನಿವಾಸಿಗಳಿಗೆ ಶುದ್ಧ ಗಾಳಿಯೇ ಸಿಗುತ್ತಿಲ್ಲ.

ಕೈಗಾರಿಕಾ ಪ್ರದೇಶಗಳ ಸುತ್ತಮುತ್ತಲಿನ ನಿವಾಸಿಗಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಉಸಿರಾಟದ ತೊಂದರೆಯಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ನಗರಕ್ಕೆ ಹೊಂದಿಕೊಂಡಿರುವ ಅಂತರಸನಹಳ್ಳಿ ಕೈಗಾರಿಕಾ ವಲಯದ ಅಕ್ಕಿಗಿರಣಿಗಳು ಜನರ ಬದುಕು ಕಸಿಯುತ್ತಿದೆ. ಗಿರಣಿಗಳು ಉಗುಳುವ ಹೊಗೆಯಿಂದ ಕಾರ್ಮಿಕರು, ಸ್ಥಳೀಯರ ಶ್ವಾಸಕೋಶ ಹಾಳಾಗಿದೆ.

ನಗರದಲ್ಲಿ ಕೋವಿಡ್ ಸಮಯದಲ್ಲಿ ವಾಯು ಗುಣಮಟ್ಟ ಸಾಕಷ್ಟು ಪ್ರಮಾಣದಲ್ಲಿ ಸುಧಾರಿಸಿತ್ತು. ಆದರೆ ನಂತರದ ದಿನಗಳಲ್ಲಿ ಇದು ಅಧಿಕವಾಗುತ್ತಲೇ ಸಾಗಿದೆ. ವಾಹನ, ಕೈಗಾರಿಕೆಗಳ ಸಂಖ್ಯೆ ಹೆಚ್ಚಿದಂತೆ ವಾಯು ಮಾಲಿನ್ಯ ಹೆಚ್ಚುತ್ತಲೇ ಇದೆ. ಕೈಗಾರಿಕೆಗಳು ಬೇಕು. ಆದರೆ ಮಾಲಿನ್ಯ ನಿಯಂತ್ರಣ ಮಾಡಬೇಕಿದೆ.

5.55 ಲಕ್ಷ ಬೈಕ್‌: ನಗರದ ಹೊರಭಾಗದಲ್ಲಿ ಕೈಗಾರಿಕೆಗಳಿಂದ ವಾಯು ಮಾಲಿನ್ಯ ಹೆಚ್ಚಾದರೆ, ಒಳಗಡೆ ವಾಹನಗಳ ಅತಿಯಾದ ಓಡಾಟ ಜನರಿಗೆ ಕಿರಿಕಿರಿ ಎನಿಸುತ್ತಿದೆ. ತುಮಕೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿಯೇ 5,55,531 ಬೈಕ್‌ಗಳು, 67 ಸಾವಿರ ಕಾರುಗಳು ನೋಂದಣಿಯಾಗಿವೆ.

7,164 ಪ್ಯಾಸೆಂಜರ್‌ ಆಟೊ, 3,076 ಗೂಡ್ಸ್‌ ಆಟೊ, 14,009 ಗೂಡ್ಸ್‌ ಲಾರಿ, ಕೆಎಸ್‌ಆರ್‌ಟಿಸಿ, ಖಾಸಗಿ ಮತ್ತು ಶಾಲಾ–ಕಾಲೇಜು ಬಸ್‌ಗಳು ಸೇರಿದಂತೆ ಒಟ್ಟು 1,887 ಬಸ್‌ಗಳು ಓಡಾಡುತ್ತಿವೆ. 227 ಆಂಬುಲೆನ್ಸ್‌ಗಳಿವೆ. ಇಷ್ಟು ವಾಹನಗಳಿಂದ ಹೊರ ಬರುವ ಹೊಗೆ, ದೂಳು ವಾಯು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ.

ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೀಡಿದ ನೋಟಿಸ್‌

ವರ್ಷ;ನೋಟಿಸ್‌;ಅಂತಿಮ ನೋಟಿಸ್‌;ಮುಚ್ಚಿದ ಕೈಗಾರಿಕೆ

2020–21;80;09;07

2021–22;135;21;03

2022–23;122;08;00

2023–24;138;06;00

2024–25;165;12;01

ಗಾಳಿ ಕಲುಷಿತ, ಕುಸಿದ ಗುಣಮಟ್ಟ ಅಗತ್ಯ ಕ್ರಮ ವಹಿಸದ ಮಂಡಳಿ ನೋಟಿಸ್ ನೀಡಲಷ್ಟೇ ಸೀಮಿತ

6 ಕೈಗಾರಿಕೆ ಪತ್ತೆ ವಸಂತನರಸಾಪುರದಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುತ್ತಿರುವ 6 ಕೈಗಾರಿಕೆಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕಾ ವಲಯ ಹೊರತು ಪಡಿಸಿದರೆ ಬೇರೆ ಯಾವುದೇ ಕಡೆಗಳಲ್ಲಿ ಸಮಸ್ಯೆಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯ ತಡೆಗೆ ಪೂರಕವಾದ ಕಾರ್ಯಕ್ರಮ ಜಾರಿಗೊಳಿಸಲಾಗುವುದು. ರವಿಚಂದ್ರ ಪರಿಸರ ಅಧಿಕಾರಿ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.