ತುಮಕೂರು: ನಗರದಲ್ಲಿ ದಸರಾ ಸಂಭ್ರಮ ಕಳೆಗಟ್ಟುತ್ತಿದೆ. ದೀಪಾಲಂಕಾರ, ಅಂಬಾರಿ ಬಸ್ ಸಂಚಾರ, ಹೆಲಿಕಾಪ್ಟರ್ ಹಾರಾಟ, ವಿವಿಧ ಕಲಾ ತಂಡಗಳ ಪ್ರದರ್ಶನ ಜನರ ಖುಷಿ ಇಮ್ಮಡಿಗೊಳಿಸಿದೆ.
ಹಲವು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ದಸರಾ ಎಲ್ಲ ವರ್ಗದ ಜನರನ್ನು ಒಳಗೊಳ್ಳುತ್ತಿದೆ. ನೃತ್ಯ ಪ್ರದರ್ಶನ, ಸುಗಮ ಸಂಗೀತ ವೀಕ್ಷಣೆಗೂ ಜನ ಆಸಕ್ತಿ ತೋರುತ್ತಿದ್ದಾರೆ. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ನಗರವನ್ನು ಕಣ್ತುಂಬಿಕೊಳ್ಳಲು ಪೈಪೋಟಿ ಜೋರಾಗಿದೆ.
ನಗರ ಸಂಚಾರಕ್ಕೆ ಉಚಿತವಾಗಿ ಅಂಬಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬಸ್‌ನಲ್ಲಿ ಕುಳಿತು ನಗರ ಸುತ್ತಲು ಸಾಕಷ್ಟು ಜನರು ಇಷ್ಟ ಪಡುತ್ತಿದ್ದಾರೆ. ಟೌನ್‌ಹಾಲ್ ಬಳಿ ಬಸ್‌ನ ಸೀಟು ಪಡೆದುಕೊಳ್ಳಲು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಶುಕ್ರವಾರ ಸಹ ಬಿ.ಎಚ್.ರಸ್ತೆಯಿಂದ ಮಹಾನಗರ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ತನಕ ಜನ ಸಾಲುಗಟ್ಟಿ ನಿಂತಿದ್ದರು.
ಬಸ್‌ನಲ್ಲಿ ಒಮ್ಮೆ 50 ಮಂದಿ ಮಾತ್ರ ಪ್ರಯಾಣಿಸಲು ಅವಕಾಶ ಇದೆ. ಬಸ್ ಹತ್ತಲು ತಳ್ಳಾಳ– ನೂಕಾಟ ಆಗದಂತೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ. ಮಧ್ಯರಾತ್ರಿ 12 ಗಂಟೆಯ ವರೆಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ.
ಸೆ.27, 28 ಮತ್ತು 30ರಂದು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಟೆನ್ನಿಸ್, ನಾಡ ಕುಸ್ತಿ, ಮ್ಯಾರಥಾನ್, ಚೆಸ್, ಶೂಟಿಂಗ್ ಸೇರಿ ಇತರೆ ಕ್ರೀಡೆಗಳಲ್ಲಿ ಭಾಗವಹಿಸಲು ಕ್ರೀಡಾಪಟುಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. 27ರಂದು ಮಹಿಳಾ ದಸರಾ ನಡೆಯಲಿದ್ದು, ರಂಗೋಲಿ, ಬೈಕ್ ರೈಡಿಂಗ್ ಏರ್ಪಡಿಸಲಾಗಿದೆ.
ದಸರಾದಲ್ಲಿ ಇಂದು
ದಸರಾ ಪ್ರಯುಕ್ತ ಚಾಮುಂಡೇಶ್ವರಿ ದೇವಿಗೆ ಅನ್ನಪೂರ್ಣೇಶ್ವರಿ ಅಲಂಕಾರ. ಸ್ಥಳ– ಜೂನಿಯರ್ ಕಾಲೇಜು ಮೈದಾನ. ರಂಗೋಲಿ ಸ್ಪರ್ಧೆ. ಸ್ಥಳ– ರಾಧಾಕೃಷ್ಣನ್ ರಸ್ತೆ. ಬೆಳಿಗ್ಗೆ 7.30.
ಟೆನ್ನಿಸ್ ಕ್ರೀಡಾ ಕಪ್ ಉದ್ಘಾಟನೆ– ಜಿ.ಪರಮೇಶ್ವರ. ಸ್ಥಳ– ವಿ.ವಿ ಆವರಣ. ಬೆಳಿಗ್ಗೆ 8. ಶೂಟಿಂಗ್ ಚೆಸ್ ಸ್ಪರ್ಧೆ. ಸ್ಥಳ– ಜಿಲ್ಲಾ ಕ್ರೀಡಾಂಗಣ.
ಬೆಳಿಗ್ಗೆ 9. ಮಹಿಳಾ ಬೈಕ್ ರೈಡಿಂಗ್. ಸ್ಥಳ– ಟೌನ್‌ಹಾಲ್. ಮಧ್ಯಾಹ್ನ 3.30 ಕಾಲೇಜು ಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರ ಒಕ್ಕೂಟದಿಂದ ಗೀಗೀಪದ ಸೋಬಾನೆ ತತ್ವಪದ ಕುಣಿಗಲ್‌ನ ರಂಗಸ್ವಾಮಿ ಮತ್ತು ತಂಡದಿಂದ ಹರಿಕಥೆ ತುರುವೇಕೆರೆ ರವಿಕುಮಾರ್ ತಂಡದಿಂದ ಲಾವಣಿ ಪದ ಭಾವಾಲಯ ಟ್ರಸ್ಟ್‌ನಿಂದ ಶಾಸ್ತ್ರೀಯ ಸಂಗೀತ ಗುಬ್ಬಿ ಪ್ರಿಯಾ ಆಂಗ್ಲ ಶಾಲೆಯಿಂದ ನೃತ್ಯ ರೂಪಕ ಆರ್‌ವಿಪಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ವೀರಗಾಸೆ ಇನ್ಫಿನಿಟಿ ಡ್ಯಾನ್ಸ್ ಸ್ಟುಡಿಯೊದಿಂದ ನೃತ್ಯ ವೈಭವ ಶಾರದ ಸ್ಕೂಲ್ ಆಫ್ ಫೈನ್ ಆರ್ಟ್ಸ್ ವತಿಯಿಂದ ಶಾಸ್ತ್ರೀಯ ನೃತ್ಯ ಕೊರಟಗೆರೆ ಕಲಾವಿದರ ಸಂಘದಿಂದ ರಂಗಗೀತೋತ್ಸವ.
ಸಂಜೆ 4 ಭೈರವ ಕಲಾ ಸಂಘದಿಂದ ‘ದೇವಲೋಕದಲ್ಲಿ ಶನೈಶ್ವರ ಪ್ರತಿಜ್ಞೆ’ ನಾಟಕ ಪ್ರದರ್ಶನ. ಸ್ಥಳ– ಗುಬ್ಬಿ ವೀರಣ್ಣ ಕಲಾ ಕ್ಷೇತ್ರ. ಬೆಳಿಗ್ಗೆ 11. ಕಲಾವಿದರ ಒಕ್ಕೂಟದಿಂದ ‘ಕುರುಕ್ಷೇತ್ರ’ ನಾಟಕ. ಮಧ್ಯಾಹ್ನ 3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.