ತುಮಕೂರು: ಜಿಲ್ಲಾಧಿಕಾರಿಯೇ ತಮ್ಮ ಲಾಗಿನ್ ಐ.ಡಿ ಕೊಟ್ಟು ಡಿಜಿಟಲ್ ಸಹಿ ಮಾಡಿಸಿದ್ದಾರೆ. ಅವರಿಂದಲೇ ಭೂಗಳ್ಳತನವಾಗಿದ್ದು, ಸರ್ಕಾರದ ಆಸ್ತಿ ಖಾಸಗಿ ವ್ಯಕ್ತಿ ಪಾಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಇಲ್ಲಿ ಬುಧವಾರ ಆರೋಪಿಸಿದರು.
‘ಗ್ರಾಮ ಆಡಳಿತಾಧಿಕಾರಿಯಿಂದ ಸಹಿ ದುರುಪಯೋಗ ಆಗಿದೆ ಎಂಬುವುದು ಮುಖ್ಯವಲ್ಲ. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೇ ಲಾಗಿನ್ ಐ.ಡಿ ಕೊಟ್ಟು ಸಹಿ ಮಾಡಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ತಕ್ಷಣಕ್ಕೆ ಅವರನ್ನು ಅಮಾನತು ಮಾಡಬೇಕು. ನ್ಯಾಯಾಂಗ ತನಿಖೆ ನಡೆಸಿ, ವರದಿ ಬರುವ ಬರುವ ತನಕ ಕೆಲಸದಿಂದ ಬಿಡುಗಡೆಗೊಳಿಸಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ಅಕ್ರಮ ನಡೆದ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಒಪ್ಪಿಕೊಂಡಿದ್ದಾರೆ. ಆದರೆ, ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ. ಸಚಿವರು ಕೇವಲ ಬೆಂಗಳೂರು ನಗರ, ಬ್ಯಾಟರಾಯನಪುರಕ್ಕೆ ಸೀಮಿತವಾಗಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ ಜಿಲ್ಲೆಯಲ್ಲಿ ಎಲ್ಲವನ್ನು ನಿಯಂತ್ರಿಸುತ್ತಿದ್ದಾರೆ. ಅಧಿಕಾರಿಗಳಿಗೆ ಅವರ ಕೃಪಾಕಟಾಕ್ಷ ಇದೆ. ಅವರೊಬ್ಬ ಅದಕ್ಷ, ಅಸಮರ್ಥ ಸಚಿವ. 40 ವರ್ಷದಿಂದ ರಾಜಕೀಯದಲ್ಲಿದ್ದು, ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ತರಲು ಸಾಧ್ಯವಾಗಿಲ್ಲ’ ಎಂದು ಟೀಕಿಸಿದರು.
ಸಮಾವೇಶ: ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕಾಗಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನಾ ನಿಗಮ (ಕೆಎಂಇಆರ್‌ಸಿ) ಮೀಸಲಿಟ್ಟ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಆ. 16ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ಮುಖಂಡರು, ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಬೇಕಾದ ಅಗತ್ಯ ಯೋಜನೆಗಳ ಕುರಿತು ಕೆಎಂಇಆರ್‌ಸಿಗೆ ಪ್ರಸ್ತಾವ ಸಲ್ಲಿಸುವ ವ್ಯವಸ್ಥೆ ಜಾರಿಯಾಗಬೇಕು. ಎಲ್ಲ ವಿಚಾರಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ತುಮಕೂರು, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಯ ಜನ ಭಾಗವಹಿಸಲಿದ್ದಾರೆ ಎಂದರು.
ಕೆಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸಮೂರ್ತಿ, ಪದಾಧಿಕಾರಿಗಳಾದ ಸಿ.ಎನ್.ದೀಪಕ್, ರಂಗನಾಥ್, ನರಸಿಂಹರಾಜು, ಚಿಂತಕ ಸಿ.ಯತಿರಾಜು, ಪರಿಸರವಾದಿ ಬಿ.ವಿ.ಗುಂಡಪ್ಪ ಹಾಜರಿದ್ದರು.
ಅರೆಮಲೆನಾಡು ನಾಶ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾರಂಗಪಾಣಿಯಲ್ಲಿ ಗಣಿಗಾರಿಕೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ಜಿಲ್ಲೆಯ ಅರೆಮಲೆನಾಡು ನಾಶವಾಗುತ್ತಿದೆ. ಗಣಿ ಬಾಧಿತ ಪ್ರದೇಶಗಳ ಪರಿಸರ ಮತ್ತು ಜನರ ಬದುಕಿನ ಪುನಶ್ಚೇತನಾ ಹೋರಾಟ ಸಮಿತಿ ಕೆಆರ್‌ಎಸ್ ವತಿಯಿಂದ ಗಣಿ ಬಾಧಿತ ಪ್ರದೇಶಗಳ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಆರ್‌ಎಸ್ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ವಿವರಿಸಿದರು. ಸರ್ಕಾರ ಒಂದು ಕಡೆ ಪರಿಸರ ಪುನಶ್ಚೇತನ ಮಾಡುತ್ತೇವೆ ಎನ್ನುತ್ತಲೇ ಮತ್ತೊಂದು ಕಡೆ ಗಣಿಗಾರಿಕೆಗೆ ಅವಕಾಶ ನೀಡುತ್ತಿದೆ. ದ್ವಂದ್ವ ನಿಲುವು ತಾಳುತ್ತಿದೆ. ಯಾವುದೇ ಪುನಶ್ಚೇತನದ ಕೆಲಸಗಳೇ ಕಾಣುತ್ತಿಲ್ಲ. ಭ್ರಷ್ಟಾಚಾರ ವ್ಯಾಪಕವಾಗಿದೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದರು.
ಸಚಿವರಿಗೂ ನಾಗರಿಕ ಸನ್ಮಾನ
ಭೂಮಿ ಮಂಜೂರಾತಿಯಲ್ಲಿ ಅಕ್ರಮ ಆಗಿರುವ ಬಗ್ಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಒಪ್ಪಿಕೊಂಡರೂ ಈವರೆಗೂ ಕ್ರಮ ತೆಗೆದುಕೊಂಡಿಲ್ಲ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೂ ನಾಗರಿಕ ಸನ್ಮಾನ ಮಾಡಿ ಪ್ರತಿಭಟನೆ ವ್ಯಕ್ತಪಡಿಸಲಾಗುವುದು ಎಂದು ಕೆಆರ್‌ಎಸ್ ರಾಜ್ಯ ಉಪಾಧ್ಯಕ್ಷ ಜ್ಞಾನಸಿಂಧೂ ಸ್ವಾಮಿ ಎಚ್ಚರಿಸಿದರು. ಜಿಲ್ಲಾ ಆಡಳಿತ ಉಳ್ಳವರು ಪ್ರಭಾವಿಗಳ ಪರ ಇದೆ. ಬೆಟ್ಟ ಗುಡ್ಡ ನದಿ ತೊರೆಗಳನ್ನು ಖಾಸಗಿಯವರಿಗೆ ಬಿಟ್ಟು ಕೊಡುತ್ತಿದೆ. ಎಲ್ಲರ ಸಂಪನ್ಮೂಲ ಕೆಲವರ ಪಾಲಾಗುತ್ತಿದೆ. ದೋಚುವವರಿಗೆ ಜನರ ಭೂಮಿ ನೀಡಲಾಗುತ್ತಿದೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.