ತುಮಕೂರಿನಲ್ಲಿ ಶನಿವಾರ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು
ತುಮಕೂರು: ರೆಡ್ಡಿ ಜನ ಸಂಘದಿಂದ ಸಮುದಾಯದ ಮಕ್ಕಳಿಗಾಗಿ ಸುಮಾರು 3 ಎಕರೆ ಜಮೀನು ಖರೀದಿಸಿ, ಹಾಸ್ಟೆಲ್ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ರೆಡ್ಡಿ ಜನ ಸಂಘದ ಅಧ್ಯಕ್ಷ ಕೆ.ಶ್ರೀನಿವಾಸರೆಡ್ಡಿ ಹೇಳಿದರು.
ನಗರದಲ್ಲಿ ಶನಿವಾರ ಜಿಲ್ಲಾ ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ರೆಡ್ಡಿ ಜನ ಸಂಘದಿಂದ ಹಮ್ಮಿಕೊಂಡಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾಸ್ಟೆಲ್ ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಸಮುದಾಯದ ಆರ್ಥಿಕ ನೆರವು ಬೇಕಾಗಿದೆ. ಗ್ರಾಮೀಣ ಭಾಗದ ಮಕ್ಕಳ ಓದಿಗೆ ಇದು ಅನುಕೂಲವಾಗಲಿದೆ. ವೇಮನ, ಹೇಮರೆಡ್ಡಿ ಮಲ್ಲಮ್ಮ ಅವರು ರೆಡ್ಡಿ ಸಮುದಾಯದ ಸಾಂಸ್ಕೃತಿಕ ನಾಯಕರು. ಪ್ರತಿಯೊಬ್ಬರ ಮನೆಯಲ್ಲಿ ಜಯಂತಿ ಆಚರಿಸಬೇಕು ಎಂದು ಸಲಹೆ ಮಾಡಿದರು.
ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ‘ವೇಮನ, ಹೇಮರೆಡ್ಡಿ ಮಲ್ಲಮ್ಮ, ಬಸವಣ್ಣ ಅವರಂತಹ ದಾರ್ಶನಿಕರನ್ನು ಒಂದು ಜಾತಿಗೆ ಸಿಮೀತವಾಗಿಸುವುದು ದುರಂತ. ವೇದಿಕೆಯಲ್ಲಿ ಅವರ ತತ್ವ, ಸಿದ್ಧಾಂತ ಹಾಡಿ ಹೊಗಳುವ ಜನರು, ಕಾರ್ಯಕ್ರಮವನ್ನು ಮಾತ್ರ ಒಂದು ಸಮುದಾಯಕ್ಕೆ ಸಿಮೀತ ಮಾಡುವುದು ಸರಿಯಲ್ಲ. ಇದು ಬದಲಾಗಬೇಕು’ ಎಂದರು.
ತಹಶೀಲ್ದಾರ್ ರಾಜೇಶ್ವರಿ, ‘ಹೇಮರೆಡ್ಡಿ ಮಲ್ಲಮ್ಮ ತನ್ನ ಕುಟುಂಬವನ್ನು ತಿದ್ದಿ, ತೀಡಿ, ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವ ಮೂಲಕ ಭಾರತೀಯ ಗೃಹಿಣಿಯರಿಗೆ ಮಾದರಿಯಾಗಿದ್ದಾರೆ. ಸಾಂಸಾರಿಕ ಜೀವನದಲ್ಲಿ ಇದ್ದುಕೊಂಡೇ ಸಂತರ ರೀತಿ ಬದುಕಿದವರು’ ಎಂದು ಬಣ್ಣಿಸಿದರು.
ಪ್ರೊ.ಅಶ್ವತ್ಥ್ ಉಪನ್ಯಾಸ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜಿಲ್ಲಾ ರೆಡ್ಡಿ ಜನ ಸಂಘದ ಜಂಟಿ ಕಾರ್ಯದರ್ಶಿ ಕೆ.ಜೆ.ರಾಜಗೋಪಾಲ ರೆಡ್ಡಿ, ಪದಾಧಿಕಾರಿಗಳಾದ ಬಿ.ಆರ್.ಮಧು, ಶಿವಾರೆಡ್ಡಿ, ಎಸ್.ಕೆ.ಮಲ್ಲಿಕಾರ್ಜುನ ರೆಡ್ಡಿ, ಎನ್.ನರಸಿಂಹ ರೆಡ್ಡಿ, ಕೆ.ನಿರ್ಮಲಾ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.