ADVERTISEMENT

ಸ್ತಬ್ಧವಾಗಿದೆ ತುಮಕೂರು ಕನ್ನಡ ಭವನ

ಕಸಾಪ: ಎರಡು ತಿಂಗಳಿನಿಂದ ಕಾರ್ಯಕ್ರಮವೂ ಇಲ್ಲ, ಆದಾಯವೂ ಇಲ್ಲ

​ಪ್ರಜಾವಾಣಿ ವಾರ್ತೆ
Published 24 ಮೇ 2020, 11:02 IST
Last Updated 24 ಮೇ 2020, 11:02 IST
ಬಾ.ಹ.ರಮಾಕುಮಾರಿ
ಬಾ.ಹ.ರಮಾಕುಮಾರಿ   

ತುಮಕೂರು: ಸದಾ ಸಾಂಸ್ಕೃತಿಕ ಚಟುವಟಿಕೆಗಳಿಂದ ಕಳೆಗಟ್ಟುತ್ತಿದ್ದ ಜಿಲ್ಲೆಯ ಕನ್ನಡ ಭವನ ಎರಡು ತಿಂಗಳಿನಿಂದ ಸ್ತಬ್ಧವಾಗಿದೆ. ಯಾವುದೇ ಕಾರ್ಯಕ್ರಮಗಳು ನಡೆಯದಿರುವುದರಿಂದ ಪರಿಷತ್ತಿಗೆ ಆದಾಯವು ಇಲ್ಲದಂತಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯು ಜಿಲ್ಲಾ ಘಟಕಕ್ಕೆ ಕಚೇರಿ ನಿರ್ವಹಣೆಗೆವಾರ್ಷಿಕ ₹1 ಲಕ್ಷ ನೀಡುತ್ತದೆ. ಜೊತೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಒಡೆತನದಲ್ಲಿರುವ ಭವನಗಳಿಂದ ಬರುವ ಬಾಡಿಗೆಯಿಂದ ಕಸಾಪದ ಆರ್ಥಿಕ ನಿರ್ವಹಣೆ ಸಾಗುತ್ತದೆ.

‘ಕಟ್ಟಡ ನಿರ್ವಹಣೆಗಾಗಿ ನಮ್ಮಲ್ಲಿ ಮೂವರು ಕೆಲಸಗಾರರು ಇದ್ದಾರೆ. ಕಚೇರಿ ಕೆಲಸಗಾರರಿಗೆ ತಿಂಗಳಿಗೆ ₹7 ಸಾವಿರ, ಸ್ವಚ್ಛತಾ ಕೆಲಸಗಾರರಿಗೆ ₹3000 ಹಾಗೂ ಶೌಚಾಲಯ ಸ್ವಚ್ಛ ಮಾಡುವವರಿಗೆ 2,000 ನೀಡುತ್ತೇವೆ. ವಿದ್ಯುತ್‌ ಶುಲ್ಕ ಕನಿಷ್ಠ ₹ 4,000 ಬರುತ್ತದೆ. ತಿಂಗಳಿಗೆ ಒಟ್ಟಾರೆ ನಿರ್ವಹಣೆ ವೆಚ್ಚ ₹ 20 ಸಾವಿರದಂತೆ ವರ್ಷಕ್ಕೆ ₹ 2.40 ಲಕ್ಷ ಖರ್ಚಾಗುತ್ತದೆ. ಇದರ ಜೊತೆಗೆ ಸಣ್ಣಪುಟ್ಟ ರಿಪೇರಿ ವೆಚ್ಚವನ್ನೂ ಭರಿಸಬೇಕು. ಕೇಂದ್ರ ಸಮಿತಿ ನೀಡುವ ₹1 ಲಕ್ಷ ಅನುದಾನ ಜೊತೆಗೆ ಕನ್ನಡ ಭವನದ ಬಾಡಿಗೆ ಹಣವನ್ನೂ ಇದಕ್ಕೆ ವಿನಿಯೋಗಿಸುತ್ತಿದ್ದೆವು. ಹೀಗಾಗಿ ಈವರೆಗೆ ಯಾವುದೇ ಸಮಸ್ಯೆ ಆಗಿರಲಿಲ್ಲ’ ಎನ್ನುತ್ತಾರೆ ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ ರಮಾಕುಮಾರಿ.

ADVERTISEMENT

ದಿನಕ್ಕೆ ಕನ್ನಡ ಭವನಕ್ಕೆ ₹3 ಸಾವಿರದಿಂದ ₹4 ಸಾವಿರ ಬಾಡಿಗೆ ವಿಧಿಸುತ್ತಿದ್ದೆವು. ತಿಂಗಳಿಗೆ ನಾಲ್ಕಾರು ದಿನ ಬಾಡಿಗೆ ನೀಡುತ್ತಿದ್ದೆವು. ಬಾಡಿಗೆ ಹಣದಲ್ಲಿಯೇ ನಿರ್ವಹಣೆಯ ಖರ್ಚು ನಿಭಾಯಿಸುತ್ತಿದ್ದೆವು. ಆದರೆ, ಈ ಬಾರಿ ಮಾರ್ಚ್‌ನಿಂದ ಈ ಭವನಗಳನ್ನು ಬಾಡಿಗೆಗೆ ನೀಡಲಿಲ್ಲ ಎಂದು ಅವರು ಮಾಹಿತಿ ನೀಡಿದರು.

ಸಂಸ್ಥಾಪನಾ ದಿನಕ್ಕೂ ಅನುದಾನವಿಲ್ಲ: ಕೇಂದ್ರಸಮಿತಿ ಜಿಲ್ಲಾ ಸಾಹಿತ್ಯ ಪರಿಷತ್ತು ನಡೆಸುವ ಯಾವುದೇ ಕಾರ್ಯಕ್ರಮಗಳಿಗೆ ಹಣ ನೀಡುವುದಿಲ್ಲ. ನಿರ್ವಹಣೆಗಾಗಿ ನೀಡುವ ಹಣದಲ್ಲಿಯೇ ಕಾರ್ಯಕ್ರಮ ನಡೆಸಬೇಕು. ಪ್ರತಿವರ್ಷ ಮೇ 5ರಂದು ನಡೆಯುವ ಕಸಾಪ ಸಂಸ್ಥಾಪನಾ ದಿನಾಚರಣೆಗೆ ಮಾತ್ರ ಹಣ ನೀಡುತ್ತಿತ್ತು. ಆದರೆ ಈ ವರ್ಷ ಆಚರಣೆಗೆ ಯಾವುದೇ ನಿರ್ದೇಶನವನ್ನು ನೀಡಿರಲಿಲ್ಲ, ಅನುದಾನವು ಬಂದಿಲ್ಲ. ಆದಾಗ್ಯೂ ಸಾಂಕೇತಿಕವಾಗಿ ಸಂಸ್ಥಾಪನಾ ದಿನಾಚರಣೆ ಆಚರಿಸಿದ್ದೇವೆ ಎಂದು ರಮಾಕುಮಾರಿ ತಿಳಿಸಿದರು.

ಕಳೆದ ವರ್ಷ ಸಂಗ್ರಹಿಸಿದ್ದ ಕನ್ನಡ ಭವನದ ಬಾಡಿಗೆ ಹಣ ಉಳಿತಾಯ ಮಾಡಿದ್ದರಿಂದ ಇದುವರೆಗೆ ಜಿಲ್ಲಾ ಸಮಿತಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿಲ್ಲ. ಯಾವುದೇ ಕಾರ್ಯಕ್ರಮ ನಡೆಯದಿರುವುದರಿಂದ ಖರ್ಚು ಕಡಿಮೆಯಿದೆ. ಆದರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿರ್ವಹಣೆ ವೆಚ್ಚ ಭರಿಸಲು ಪರದಾಡುತ್ತಿವೆ. ಶಿರಾ, ತುರುವೇಕರೆ, ಕುಣಿಗಲ್‌ನಲ್ಲಿ ಕನ್ನಡ ಭವನಗಳಿವೆ. ಆದರೆ ಅವುಗಳನ್ನು ಬಾಡಿಗೆ ನೀಡದ ಕಾರಣ ಯಾವುದೇ ಆದಾಯವಿಲ್ಲ. ಕೇಂದ್ರ ಸಮಿತಿ ತಾಲ್ಲೂಕು ಘಟಕಗಳಿಗೆ ನಿರ್ವಹಣಾ ವೆಚ್ಚವಾಗಿ ಕೇವಲ ₹ 15,000 ನೀಡುವುದರಿಂದ ಅವುಗಳ ನಿರ್ವಹಣೆ ಕಷ್ಟವಾಗಿದೆ ಎಂದು ರಮಾಕುಮಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.