ADVERTISEMENT

ತುಮಕೂರು | 1.86 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ

21ರಿಂದ ಪೋಲಿಯೊ ಲಸಿಕೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:01 IST
Last Updated 2 ಡಿಸೆಂಬರ್ 2025, 7:01 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ತುಮಕೂರು: ಜಿಲ್ಲೆಯಲ್ಲಿ ಡಿ. 21ರಿಂದ ಪೋಲಿಯೊ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದು, ಒಟ್ಟು 1,86,969 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

1,211 ಲಸಿಕಾ ಕೇಂದ್ರ ಆರಂಭಿಸಲಾಗಿದೆ. ಡಿ.21, 22 ಮತ್ತು 23ರಂದು ಗ್ರಾಮೀಣ ಭಾಗ, ಡಿ.22, 23 ಹಾಗೂ 24ರಂದು ನಗರ ಪ್ರದೇಶದ ಮನೆ-ಮನೆಗೆ ಭೇಟಿ ನೀಡಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುತ್ತದೆ.

‘ದೇವಸ್ಥಾನ, ಪ್ರವಾಸಿ ತಾಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಅಮಾನಿಕೆರೆ, ಟೋಲ್‌, ಜಿಲ್ಲೆಗೆ ಪ್ರವೇಶಿಸುವ ಜಾಗದಲ್ಲಿ ಕಡ್ಡಾಯವಾಗಿ ಪೋಲಿಯೊ ಲಸಿಕಾ ಕೇಂದ್ರ ತೆರೆಯಬೇಕು’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಅಲೆಮಾರಿ ಜನಾಂಗ ವಾಸಿಸುವ ಮತ್ತು ಕೈಗಾರಿಕಾ ವಲಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಎಲ್ಲ ಮಕ್ಕಳಿಗೆ ಲಸಿಕೆ ನೀಡಬೇಕು. ಸಿಬ್ಬಂದಿ ಅಗತ್ಯ ತರಬೇತಿ ಪಡೆಯಬೇಕು. ಲಸಿಕೆಯ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಡಿ. 15ರಿಂದ 24ರ ವರೆಗೆ ನಿರಂತರವಾಗಿ ವಿದ್ಯುತ್‌ ಪೂರೈಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪೋಲಿಯೊ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಬೇಕು. ಅಂಗನವಾಡಿಯಲ್ಲಿ ಲಸಿಕಾ ಕೇಂದ್ರ ತೆರೆಯಬೇಕು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಡಿಎಚ್‌ಒ ಡಾ.ಬಿ.ಎಂ.ಚಂದ್ರಶೇಖರ್‌, ಆರ್‌ಸಿಎಚ್‌ ಅಧಿಕಾರಿ ಡಾ.ಸಿ.ಆರ್‌.ಮೋಹನ್‌, ವಿಶ್ವ ಆರೋಗ್ಯ ಸಂಸ್ಥೆ ಎಸ್‍ಎಂಒ ಡಾ.ಸುಧೀರ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.