ತುಮಕೂರು: ರಾಜ್ಯ ಸರ್ಕಾರ ಕೈಗೊಂಡಿರುವ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಜಿಲ್ಲೆಯಲ್ಲಿ ತೆವಳುತ್ತಾ ಸಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದರೆ ‘ಆಧಾರ್ ಕಾರ್ಡ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು’ ಎಂದು ನಮೂದಿಸಲಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಸಾಕಷ್ಟು ಮಂದಿ ದೂರ ಉಳಿಯುತ್ತಿದ್ದಾರೆ.
ಸೆ. 15ರಿಂದ ಸಮೀಕ್ಷೆ ಆರಂಭವಾಗಿದೆ. ಜಿಲ್ಲಾ ಆಸ್ಪತ್ರೆ, ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮದ ಅಂಕಿ–ಅಂಶದ ಪ್ರಕಾರ ಜಿಲ್ಲೆಯಲ್ಲಿ 2,167 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಅ. 10ರ ವರೆಗೆ ಕೇವಲ 165 ಮಂದಿ ಮಾತ್ರ ಸಮೀಕ್ಷೆಯಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ಸಲ್ಲಿಸಿದ್ದಾರೆ.
ಕುಣಿಗಲ್, ಪಾವಗಡ ಹೊರತುಪಡಿಸಿ ಉಳಿದ 8 ತಾಲ್ಲೂಕಿಗೆ ತಲಾ ಒಬ್ಬರು ಸಮೀಕ್ಷಕರನ್ನು ನೇಮಿಸಲಾಗಿದೆ. ಸಮೀಕ್ಷಕರು ಇಲ್ಲದ ಕಡೆ ‘ಶೂನ್ಯ’ ಸಾಧನೆಯಾಗಿದೆ. ಈ ಎರಡು ತಾಲ್ಲೂಕಿನಲ್ಲಿ ಇದುವರೆಗೆ ಒಬ್ಬರು ಸಹ ನೋಂದಣಿ ಮಾಡಿಸಿಕೊಂಡಿಲ್ಲ. ಸಮೀಕ್ಷೆ ಪೂರ್ಣಗೊಳಿಸಲು 45 ದಿನ ಗಡುವು ನೀಡಿದ್ದು, ಈಗಾಗಲೇ ಅರ್ಧದಷ್ಟು ದಿನಗಳು ಕಳೆದಿವೆ. ಕನಿಷ್ಠ ಶೇ 10ರಷ್ಟು ಜನರನ್ನು ತಲುಪಲು ಸಾಧ್ಯವಾಗಿಲ್ಲ.
ಲಿಂಗತ್ವ ಅಲ್ಪಸಂಖ್ಯಾತರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಗುತ್ತದೆ. ‘ಗೌಪ್ಯತೆ ಕಾಪಾಡುವುದಿಲ್ಲ’ ಎಂಬ ಕಾರಣಕ್ಕೆ ತುಂಬಾ ಜನ ಮನೆ ಬಿಟ್ಟು ಹೊರ ಬರುತ್ತಿಲ್ಲ. ಸಮೀಕ್ಷೆಯಲ್ಲಿ ಭಾಗವಹಿಸಿ, ಅಗತ್ಯ ಮಾಹಿತಿ ಸಲ್ಲಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯ ಸಿಗುತ್ತದೆ ಎಂಬುವುದನ್ನು ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ.
‘ಮಹಿಳಾ ಅಭಿವೃದ್ಧಿ ನಿಗಮ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಮಧ್ಯೆ ಎನ್‌ಜಿಒ ಸಂಸ್ಥೆಗಳು ಸೇತುವೆಯಂತೆ ಕೆಲಸ ಮಾಡುತ್ತಿದ್ದವು. ಆದರೆ, ಸಮೀಕ್ಷೆಗೆ ಎನ್‌ಜಿಒ ಕಡೆಗಳಿಂದ ಅಗತ್ಯ ಸಹಕಾರ ಸಿಗುತ್ತಿಲ್ಲ. ಇದು ಸಮೀಕ್ಷೆಯ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಸಂಸ್ಥೆಯ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರೆ ನಿಗದಿತ ಗುರಿ ತಲುಪಲು ಸಾಧ್ಯ’ ಎಂದು ನಿಗಮದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
‘ಅಧಿಕಾರಿಗಳು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನೀಡಿದಷ್ಟು ಆದ್ಯತೆಯನ್ನು ಈ ಸಮೀಕ್ಷೆಗೆ ನೀಡುತ್ತಿಲ್ಲ. ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿಲ್ಲ. ನಗರದಲ್ಲಿ ಭಿತ್ತಿಪತ್ರ ಅಂಟಿಸುವುದು ಬಿಟ್ಟರೆ ಬೇರೆ ಕಾರ್ಯಕ್ರಮ ಮಾಡಿಲ್ಲ. ಸಮುದಾಯದ ಸಂಘ–ಸಂಸ್ಥೆಗಳ ಜತೆ ಸಭೆ ನಡೆಸಿ ತಿಳಿವಳಿಕೆ ನೀಡಿಲ್ಲ. ತುಂಬಾ ಜನರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಹೀಗಾಗಿ ಸಮೀಕ್ಷೆ ಕುಂಟುತ್ತಾ ಸಾಗುತ್ತಿದೆ’ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.