ADVERTISEMENT

TUMUL | ತುಮಕೂರು: ವೆಂಕಟೇಶ್‌ಗೆ ಒಲಿಯುವುದೇ ಅದೃಷ್ಟ?

ತುಮುಲ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ; ಇಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 0:30 IST
Last Updated 22 ಜನವರಿ 2025, 0:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಅಧ್ಯಕ್ಷ ಸ್ಥಾನಕ್ಕೆ ಜ. 22ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ ಎಂಬ ‘ಗುಟ್ಟು’ ಕುತೂಹಲದ ಘಟ್ಟ ತಲುಪಿದೆ.

ಪಾವಗಡ ಶಾಸಕ ಎಚ್.ವಿ.ವೆಂಕಟೇಶ್ ಅವರನ್ನು ತುಮುಲ್ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿದ್ದು, ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಧ್ಯಕ್ಷ ಸ್ಥಾನ ನೀಡುವ ಸಲುವಾಗಿಯೇ ನಾಮ ನಿರ್ದೇಶನ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಮ್ಮ ಪತ್ನಿ ಕೆ.ಪಿ.ಭಾರತೀದೇವಿ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಶಾಸಕ ಎಸ್.ಆರ್.ಶ್ರೀನಿವಾಸ್ ಸಾಕಷ್ಟು ಪ್ರಯತ್ನ ನಡೆಸಿದ್ದರು. ಹಿರಿಯರಾದ ತಿಪಟೂರು ತಾಲ್ಲೂಕಿನ ಎಂ.ಕೆ.ಪ್ರಕಾಶ್ ಅವಕಾಶಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಮಧುಗಿರಿಯ ಬಿ.ನಾಗೇಶ್‌ಬಾಬು ಸಹ ಪ್ರಯತ್ನಿಸಿದ್ದರು. ಈವರೆಗೆ ಈ ಮೂವರಲ್ಲಿ ಒಬ್ಬರು ಅಧ್ಯಕ್ಷರಾಗಬಹುದು ಎಂದೇ ಹೇಳಲಾಗುತಿತ್ತು. ಆದರೆ ಈಗ ಕಾಂಗ್ರೆಸ್ ನಾಯಕರ ಲೆಕ್ಕಾಚಾರವೇ ಬದಲಾಗಿದೆ.

ADVERTISEMENT

ಕಾಂಗ್ರೆಸ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು, ಅವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂದು ಹೇಳಲಾಗುತಿತ್ತು. ಆದರೆ ಪಕ್ಷದ ಆಂತರಿಕ ಬೆಳವಣಿಗೆಯಲ್ಲಿ ಅಚ್ಚರಿ ಅಭ್ಯರ್ಥಿ ಹೊರ ಹೊಮ್ಮಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತುಮುಲ್ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಜಿಲ್ಲೆಯವರಾದ ಸಹಕಾರ ಸಚಿವ ಕೆ.ಎನ್.ರಾಜಣ್ಣ ನಿರ್ಧಾರವೇ ಅಂತಿಮ ಎಂದು ಹೇಳಲಾಗುತ್ತಿದೆ.

ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ರಾಜಣ್ಣ ನಡುವೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿವೆ. ನಿರ್ದೇಶಕರ ಚುನಾವಣೆಯಲ್ಲಿ ಶ್ರೀನಿವಾಸ್ ಪತ್ನಿ ಭಾರತೀದೇವಿ ವಿರುದ್ಧ ಸ್ಪರ್ಧಿಸಿದ್ದವರಿಗೆ ರಾಜಣ್ಣ ಕುಟುಂಬದವರು ಬೆಂಬಲ ನೀಡಿದ್ದರು ಎಂದು ಹೇಳಲಾಗುತ್ತಿದೆ. ಭಾರತೀದೇವಿ ಆಯ್ಕೆಯಾದ ನಂತರ ಇಬ್ಬರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿದ್ದು, ಅವರಿಗೆ ಅಧಿಕಾರ ತಪ್ಪಿಸಲು ಹೊಸ ತಂತ್ರಗಾರಿಗೆ ಹೆಣೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀದೇವಿಗೆ ಅವಕಾಶ ತಪ್ಪಿಸಿ ಉಳಿದ ನಿರ್ದೇಶಕರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಅವರು ಪ್ರತಿರೋಧ ತೋರಬಹುದು ಎಂಬ ಕಾರಣಕ್ಕೆ ಚುನಾಯಿತ ನಿರ್ದೇಶಕರನ್ನು ಹೊರತುಪಡಿಸಿ ನಾಮ ನಿರ್ದೇಶಿತ ಸದಸ್ಯರಿಗೆ ಅವಕಾಶ ಮಾಡಿಕೊಡಲು ಜಿಲ್ಲೆಯ ನಾಯಕರು ಮುಂದಾಗಿದ್ದಾರೆ. ಈ ಎಲ್ಲ ಲೆಕ್ಕಾಚಾರಗಳನ್ನು ಇಟ್ಟುಕೊಂಡು ‘ಅಹಿಂದ’ ದಾಳ ಉರುಳಿ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳನ್ನು ‘ತಣ್ಣಗೆ’ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಚುನಾಯಿತ ನಿರ್ದೇಶಕರಿಗೆ ಅವಕಾಶ ನೀಡದೆ ನಾಮ ನಿರ್ದೇಶಿತ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಲು ಜಿಲ್ಲೆಯ ನಾಯಕರು ಮುಂದಾಗಿರುವುದಕ್ಕೆ ಅಸಮಾಧಾನವೂ ವ್ಯಕ್ತವಾಗಿದೆ.

ಬುಧವಾರ ಬೆಳಿಗ್ಗೆ ಕೆ.ಎನ್.ರಾಜಣ್ಣ ನೇತೃತ್ವದಲ್ಲಿ ನಿರ್ದೇಶಕರ ಸಭೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ತಿಳಿಸಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.