ADVERTISEMENT

ಸಾಫ್ಟ್‌ವೇರ್‌ ಸೇರಿದಂತೆ ಹಲವು ತಾಂತ್ರಿಕ ಅಡಚಣೆ: ಇ-ಖಾತೆಗೆ ತಪ್ಪದ ಜನರ ಪರದಾಟ

ಪಾಂಡುರಂಗಯ್ಯ ಎ.ಹೊಸಹಳ್ಳಿ
Published 19 ಜನವರಿ 2026, 6:20 IST
Last Updated 19 ಜನವರಿ 2026, 6:20 IST
ತುರುವೇಕೆರೆ ತಾಲ್ಲೂಕು ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ
ತುರುವೇಕೆರೆ ತಾಲ್ಲೂಕು ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ   

ತುರುವೇಕೆರೆ: ಸಾರ್ವಜನಿಕರ ಆಸ್ತಿ ಡಿಜಿಟಲೀಕರಣ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಇ-ಖಾತಾ ಪ್ರಕ್ರಿಯೆ ಆರಂಭಿಸಿ ತಿಂಗಳು ಕಳೆದರೂ ತಾಂತ್ರಿಕ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ ಜನರ ಪರದಾಟ ತಪ್ಪಿಲ್ಲ.

ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಇ-ಖಾತೆ ಪಡೆಯಲು ಅಥವಾ ಗ್ರಾಮ ಪಂಚಾಯಿತಿಯಿಂದಲೂ ಪಡೆಯಬಹುದೆಂದು ಸರ್ಕಾರ ಇ-ಸ್ವತ್ತು 2.0 ತಂತ್ರಾಂಶ ಪರಿಚಯಿಸಿದೆ.

ತಾಲ್ಲೂಕಿನ ಕಸಬಾ, ದಂಡಿನಶಿವರ, ಮಾಯಸಂದ್ರ ಮತ್ತು ದಬ್ಬೇಘಟ್ಟ ಹೋಬಳಿಯ 27 ಗ್ರಾಮ ಪಂಚಾಯಿತಿಗಳಲ್ಲೂ ಸರ್ಕಾರ ಹೇಳಿದಂತೆ ಸಕಾಲಕ್ಕೆ ಇ-ಸ್ವತ್ತುಗಳು ಸಿಗುತ್ತಿಲ್ಲ. ಜನರು ತಮ್ಮ ದಾಖಲೆಗಳೊಂದಿಗೆ ಕಚೇರಿಗೆ ಹೋದರೆ ಇ-ಖಾತಾ ಸಾಫ್ಟ್‌ವೇರ್ ಕಾರ್ಯನಿರ್ವಹಿಸುತ್ತಿಲ್ಲ. ಸರಿಯಾದ ಮೇಲೆ ಬನ್ನಿ ಎಂದು ಪಂಚಾಯಿತಿ ಅಧಿಕಾರಿಗಳು ಹೇಳಿ ಕಳುಹಿಸುತ್ತಿದ್ದಾರೆ.

ADVERTISEMENT

ಅರ್ಜಿದಾರ ಅಕೌಂಟ್ ನಂಬರ್ ಎಂಟ್ರಿ ಮಾಡಿದರೆ ಬೇರೊಬ್ಬರ ಹೆಸರು ಮತ್ತು ವಿಳಾಸ ಬರುತ್ತದೆ. ಇ-ಸ್ವತ್ತು ತಂತ್ರಾಂಶದ ವಿದ್ಯುತ್ ಬಿಲ್ ಕಾಲಂನಲ್ಲಿ 10 ಅಂಕಿಯ ಅಕೌಂಟ್ ನಂಬರ್ ಕೇಳುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಏಳು ಅಂಕಿಯ ನಂಬರ್ ಇದೆ. ಅರ್ಜಿದಾರನ ಜಮೀನಿನ ಇ.ಸಿ ಫಿಟ್‌ ಆಗುತ್ತಿಲ್ಲ. ಇ-ಸ್ವತ್ತನ್ನು ಸಕಾಲದ ಮಾದರಿಯಲ್ಲಿ 15 ದಿನಗಳಿಗೆ ನಿಗದಿಪಡಿಸಿರುವುದರಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗುತ್ತದೆ. ಇದರಿಂದ ಬಡವರಿಗೆ ಹಣ ಹೊಂದಿಸುವುದು ತೊಂದರೆಯಾಗಲಿದೆ.

ಗ್ರಾಮ ಠಾಣಾ ಸ್ವತ್ತುಗಳಿಗೆ ಸಂಬಂಧಿಸಿದ ಇ-ಸ್ವತ್ತು ಮಾಡುವಾಗ ನೋಂದಣಿಯಾಗಿರುವ ಸೇಲ್ ಡೀಡ್, ವಿಲ್ ಇನ್ನಿತರೆ ದಾಖಲೆಗಳನ್ನು ಕೇಳುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಪಿತ್ರಾರ್ಜಿತ ಸ್ವತ್ತುಗಳಿಗೆ ನೋಂದಾಯಿತ ದಾಖಲೆಗಳು ಲಭ್ಯವಿಲ್ಲದಿರುವುದಿಲ್ಲ. ಅದೇ ರೀತಿ ಆಸ್ತಿ ಅಥವಾ ಜಮೀನಿನ ಅಳತೆಯನ್ನು ಅಡಿಗಳಲ್ಲಿ ಎಂಟ್ರಿ ಮಾಡಿದರೆ ಅದು ಮೀಟರ್ ಕಾಲಂನಲ್ಲಿ ನಮೂದಾಗುತ್ತದೆ. ಅರ್ಜಿದಾರ ಇ–ಕೆವೈಸಿ ಮಾಡಿದಾಗ ಆತನ ವಿಳಾಸ ಮತ್ತು ಸಂಬಂಧ ತಪ್ಪಾಗಿ ತೋರುತ್ತದೆ. ಈಗಾಗಲೇ ಅನುಮೋದನೆ ಪಡೆದಿರುವ ಬಡಾವಣೆಗಳಲ್ಲಿ ಬಾಕಿ ಇರುವ ನಿವೇಶನಗಳ ಇ-ಸ್ವತ್ತು ಮಾಡಲು ಸಾದ್ಯವಾಗುತ್ತಿಲ್ಲ ಇಂತಹ ಅನೇಕ ಸಮಸ್ಯೆಗಳು ಇರುವುದರಿಂದ ಇ-ಸ್ವತ್ತು ಜನರ ಕೈಗೆ ಸಿಗುತ್ತಿಲ್ಲ ಎಂದು ಜನರು ದೂರುತ್ತಾರೆ.

ಇ-ಸ್ವತ್ತು 2.0 ತಂತ್ರಾಂಶದ ಸಮಸ್ಯೆ ಸರಿಪಡಿಸಲಾಗಿದೆ ಎಂದು ಮೇಲಧಿಕಾರಿಗಳು ಹೇಳಿದ್ದಾರೆ. ಮಾಸ್ಟರ್ ಟ್ರೈನರ್‌ಗಳ ಜೊತೆ ಇ-ಖಾತಾ ಅರ್ಜಿ ಹಾಕುವ ವಸ್ತುಸ್ಥಿತಿ ಕುರಿತು ಚರ್ಚಿಸಿ ಆನಂತರ ಎಲ್ಲ ಪಿಡಿಒಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು.
ಅನಂತರಾಜು ಇಒ
ಸಿದ್ದಲಿಂಗಸ್ವಾಮಿ
ಗ್ರಾಮೀಣ ಪ್ರದೇಶದ ಜನರಿಗೆ ಅಥವಾ ಸ್ವತ್ತುಗಳಿಗೆ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ ನೀಡಲು ಸರ್ಕಾರ ನಾಮಕಾವಸ್ಥೆಗೆ ಇ- ಖಾತಾ ಅಭಿಯಾನ ಮಾಡಿದೆ. ಜನರು ಪಂಚಾಯಿತಿಗೆ ಅಲೆದಾಡುವಂತಾಗಿದೆ. ಕೂಡಲೇ ಸಮಸ್ಯೆ ಸರಿಪಡಿಸಲಿ.
ಸಿದ್ಧಲಿಂಗಸ್ವಾಮಿ ದೊಂಬರನಹಳ್ಳಿ ತುರುವೇಕೆರೆ ವಿಷ್ಣು ಸೇವಾ ಸಮಿತಿ ಸದಸ್ಯ
ಕಚೇರಿಗೆ ಅಲೆಯುವ ಅಗತ್ಯವಿಲ್ಲ
ತುರುವೇಕೆರೆ ಪಟ್ಟಣದ ವ್ಯಾಪ್ತಿಯಲ್ಲಿ ಈಗಾಗಲೇ 4.900 ಇ-ಖಾತೆಗಳು ಆಗಿವೆ. ಇನ್ನೂ 4000 ಬಾಕಿ ಇದ್ದು ಆಸ್ತಿ ಮಾಲೀಕರು ತಮ್ಮ ಮನೆಯಲ್ಲೇ ಆನ್‌ಲೈನ್ ಅಥವಾ ಗ್ರಾಮ್ ಒನ್‌ನಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಹಾಕಿದರೆ ಅದು ಪಟ್ಟಣ ಪಂಚಾಯಿತಿ ಲಾಗಿನ್‌ಗೆ ಬರುತ್ತದೆ. ಅದನ್ನು ಕಚೇರಿ ದಾಖಲೆಯೊಂದಿಗೆ ಪರಿಶೀಲಿಸಿ ಅನುಮೋದನೆ ನೀಡಲಾಗುವುದು. ಇದಕ್ಕಾಗಿ ಕಚೇರಿಗೆ ಜನರು ಅಲೆಯುವ ಅಗತ್ಯವಿಲ್ಲ. ಪಟ್ಟಣಿಗರು ಇ-ಸ್ವತ್ತು ಪಡೆಯುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.