
ತುರುವೇಕೆರೆ: ‘ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿದರೂ ನಾನೇ ಅಭ್ಯರ್ಥಿ, ಎನ್‌ಡಿಎಯಿಂದ ಟಿಕೆಟ್ ನೀಡಿದರೂ ನಾನೇ ಅಭ್ಯರ್ಥಿ. ಇದರಲ್ಲಿ ಅನುಮಾನವೇ ಬೇಡ’ ಎಂದು ಬಿಜೆಪಿ ಮಾಜಿ ಶಾಸಕ ಮಸಾಲ ಜಯರಾಂ ಹೇಳಿದರು.
ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಅಷ್ಟರಲ್ಲೇ ಎಲ್ಲ ಪಕ್ಷಗಳಲ್ಲಿ ಮುಂದಿನ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಅವರವರೇ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಇವರ ಆರ್ಭಟಕ್ಕೆ ತಕ್ಕ ಉತ್ತರ ಕೊಡುವಂತೆ ಆಗ್ರಹಿಸಿದ್ದರಿಂದ ಅನಿವಾರ್ಯವಾಗಿ ಈ ಘೋಷಣೆ ಮಾಡಬೇಕಾಗಿದೆ’ ಎಂದು ಸ್ಪಷ್ಟಪಡಿಸಿದರು.
‘ಬಿಜೆಪಿ ಹೈಕಮಾಂಡ್ ಪಕ್ಷ ಸಂಘಟನೆ ಮಾಡಲು ಸೂಚಿಸಿದೆ. ಮೈತ್ರಿಕೂಟ ಇರುತ್ತದೊ, ಇಲ್ಲವೊ ಗೊತ್ತಿಲ್ಲ. ನಾನು ಅಭ್ಯರ್ಥಿಯಾಗುವುದು ನಿಶ್ಚಿತ. ಕಾರ್ಯಕರ್ತರು ಆತಂಕ ಪಡುವ ಅವಶ್ಯಕತೆ ಇಲ್ಲ. ಟಿಕೆಟ್ ತರುವ ಜವಾಬ್ದಾರಿ ನನ್ನದು. ಗೆಲ್ಲಿಸುವ ಜವಾಬ್ದಾರಿ ನಿಮ್ಮದು’ ಎಂದರು.
‘ನಾನು ಜೆಡಿಎಸ್ ಸೇರುತ್ತೇನೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಯಾಕೆ ಹೇಳಿದ್ದಾರೊ ಗೊತ್ತಿಲ್ಲ. ನಾನು ಬಿಜೆಪಿಯಲ್ಲಿದ್ದೇನೆ. ಬಿಜೆಪಿ ವರಿಷ್ಠರು ಏನು ಹೇಳುತ್ತಾರೋ ಹಾಗೆ ಮಾಡುತ್ತೇನೆ. ಮೈತ್ರಿ ಮುಂದುವರೆದು, ಇಲ್ಲಿಗೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ಪರಿಸ್ಥಿತಿ ಬಂದು ನೀನು ಜೆಡಿಎಸ್‌ನಿಂದ ನಿಲ್ಲು ಎಂದು ಆದೇಶಿಸಿದರೆ ಅದಕ್ಕೂ ನನ್ನ ಸಮ್ಮತಿ ಇದೆ’ ಎಂದರು.
ಮಂಡಲ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಮಹೇಶ್, ನವೀನ್, ಸಿದ್ದೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಸ್ವಪ್ನಾ ನಟೇಶ್, ಆಂಜನ್ ಕುಮಾರ್, ಆಶಾ ರಾಜಶೇಖರ್, ಚಿದಾನಂದ್, ಪ್ರಭಾಕರ್, ಉಗ್ರಪ್ಪ, ಪ್ರಸಾದ್, ನರಸಿಂಹ ಮೂರ್ತಿ, ಬೊಮ್ಮಲಿಂಗಯ್ಯ, ಕಣತೂರು ನಾಗೇಶ್, ಕೋಳಾಲ ರಘು, ಅರಳೀಕೆರೆ ಸತೀಶ್, ಪಾಂಡು, ಚೂಡಾಮಣಿ, ಅನಿತಾ ಕುಮಾರಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.