
ತುರುವೇಕೆರೆ: ತಾಲ್ಲೂಕಿನಲ್ಲಿ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.
ತಾಲ್ಲೂಕಿನ ಬೆಂಕಿಕೆರೆಯಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ 130ಕ್ಕೂ ಅಧಿಕ ಸಂಘಗಳಿವೆ. ಅವುಗಳ ಪೈಕಿ 90 ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸ್ವಂತ ಕಟ್ಟಡ ಇದೆ. ಇದು ಜಿಲ್ಲೆಯಲ್ಲೇ ಅತ್ಯಧಿಕ ಸ್ವಂತ ಕಟ್ಟಡ ಹೊಂದಿದ ತಾಲ್ಲೂಕಾಗಿದೆ. ತಾಲ್ಲೂಕಿನ ರೈತರಿಗೆ ಹೈನುಗಾರಿಕೆ ಜೀವನಾಡಿ. ಜಿಲ್ಲಾ ಹಾಲು ಒಕ್ಕೂಟದಿಂದ ತಾಲ್ಲೂಕಿನ ಹೈನುಗಾರರಿಗೆ ಪ್ರತಿ ತಿಂಗಳು ₹10.5 ಕೋಟಿಗೂ ಹೆಚ್ಚು ಹಣ ಜಮಾ ಮಾಡಲಾಗುತ್ತಿದೆ. ಇದರಲ್ಲಿ ಸರ್ಕಾರದಿಂದ ಬರುವ ಪ್ರೋತ್ಸಾಹಧನ ಸೇರಿಲ್ಲ ಎಂದು ಹೇಳಿದರು.
ಪ್ರತಿ ಹಾಲು ಸಹಕಾರ ಸಂಘದಲ್ಲಿ ಹಾಲು ಶೇಖರಣೆ ಸಂಬಂಧ ಪಾರದರ್ಶಕತೆ ಇದೆ. ಗುಣಮಟ್ಟದ, ಹೆಚ್ಚು ಕೊಬ್ಬಿನಂಶವಿರುವ ಹಾಲಿಗೆ ತಕ್ಕಂತೆ ಹಣ ದೊರೆಯುತ್ತಿದೆ. ಜಿಲ್ಲೆಯಲ್ಲಿ ಸದ್ಯ ಎರಡು ಲಕ್ಷಕ್ಕೂ ಅಧಿಕ ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿದೆ. ಇದಕ್ಕಾಗಿ ಒಕ್ಕೂಟದಿಂದ ₹30 ಕೋಟಿ ವಿನಿಯೋಗಿಸಲಾಗಿದೆ. ಸಹಕಾರ ಸಂಘದ ಕಟ್ಟಡಗಳ ನಿರ್ಮಾಣಕ್ಕೆಂದು ₹9.50 ಲಕ್ಷ ನೀಡಲಾಗುತ್ತಿದೆ ಎಂದರು.
ಸಂಘದ ಅಧ್ಯಕ್ಷ ಬಿ.ಎನ್.ನಾಗರಾಜು, ಹಾಲು ಒಕ್ಕೂಟದ ವ್ಯವಸ್ಥಾಪಕ ಚಂದ್ರಶೇಖರ್ ಕೇದನೂರಿ, ಸೋಮಣ್ಣ, ಬಿ.ಎಂಎಸ್ ಉಮೇಶ್, ವೆಂಕಟೇಶ್, ಸಿದ್ದಲಿಂಗಪ್ಪ, ವಿಸ್ತರಣಾಧಿಕಾರಿಗಳಾದ ಕೆ.ಪಿ.ಮಂಜುನಾಥ್, ಎಸ್.ದಿವಾಕರ್, ಎನ್.ಕಿರಣ್ ಕುಮಾರ್, ಡಾ.ಲೋಹಿತ್, ಆರ್.ವೈ.ಸುನಿಲ್, ಸಂಘದ ಉಪಾಧ್ಯಕ್ಷ ಬಿ.ಕೆ.ನಾಗರಾಜು, ನಿರ್ದೇಶಕರಾದ ಗಂಗಾಧರಯ್ಯ, ಚೇತನ್, ಬಿ.ಗಂಗಾಧರಯ್ಯ, ಸೋಮಶೇಖರಯ್ಯ, ಗುರುಬಸವಯ್ಯ, ತಮ್ಮೇಗೌಡ, ಮಹದೇವಯ್ಯ, ಪುಷ್ಪಲತಾ, ಸರೋಜಮ್ಮ, ಕಾರ್ಯದರ್ಶಿ ಸದಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.