ತುರುವೇಕೆರೆ: ವ್ಯಾಪಾರಕ್ಕೆ ಸೂಕ್ತ ಸ್ಥಳ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ಪಟ್ಟಣದ ನೂರಾರು ಬೀದಿ ಬದಿ ವ್ಯಾಪಾರಿಗಳು ನಿತ್ಯ ಪರದಾಟು ಅನುಭವಿಸುತ್ತಿದ್ದಾರೆ.
ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದಿನ ರಸ್ತೆಯಿಂದ ದಬ್ಬೇಘಟ್ಟ ವೃತ್ತ, ತಿಪಟೂರು ರಸ್ತೆ, ಹೊಸ ಬಸ್ ನಿಲ್ದಾಣದ ಇಬ್ಬದಿ, ರಾಘವೇಂದ್ರ ಹೋಟೆಲ್ ಮುಂದಿನ ರಸ್ತೆಯಿಂದ ಅಂಬೇಡ್ಕರ್ ವೃತ್ತದವರೆಗೆ, ಬಿರ್ಲಾ ವೃತ್ತ, ವಾಣಿಜ್ಯ ಸಂಕೀರ್ಣ ಕಟ್ಟದ ಮುಂಭಾಗ ಮತ್ತು ಅದರ ಆಸುಪಾಸು, ಬಾಣಸಂದ್ರ ರಸ್ತೆ, ಮಾಯಸಂದ್ರ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗಿನ ಇಕ್ಕೆಲಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 10ರ ವರೆಗೆ ಬೀದಿ ಬದಿ ವ್ಯಾಪಾರಿಗಳು, ತರಕಾರಿ, ಹಣ್ಣು, ಪೂಜೆ ಸಾಮಗ್ರಿ, ಫಾಸ್ಟ್ ಫುಡ್ ಸೇರಿದಂತೆ ವಿವಿಧ ವ್ಯಾಪಾರದಲ್ಲಿ ತೊಡಗುತ್ತಾರೆ.
ವ್ಯಾಪಾರಿ ಸ್ಥಳದ ಗೊಂದಲ: ಬೀದಿ ಬದಿ ವ್ಯಾಪಾರ ಸಮಿತಿ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಡುವೆ ವ್ಯಾಪಾರ ಸ್ಥಳ ನಿಗದಿ ವಿಚಾರವಾಗಿ ಹಲವು ವರ್ಷಗಳಿಂದ ವಾಗ್ವಾದ ನಡೆಯುತ್ತಿತ್ತು. 2010ರಲ್ಲಿ ದಬ್ಬೇಘಟ್ಟ ರಸ್ತೆಯಲ್ಲಿರುವ ಎಪಿಎಂಸಿ ಆವರಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಖಾಯಂ ಆಗಿ ವ್ಯಾಪಾರ ಮಾಡಲು ಪಟ್ಟಣ ಪಂಚಾಯಿತಿ ಅವಕಾಶ ಮಾಡಿಕೊಟ್ಟಿತ್ತು. ಪಟ್ಟಣದಿಂದ ಒಂದು ಕಿ.ಮೀ ದೂರ ಇರುವ ಎಪಿಎಂಸಿಗೆ ಬಂದು ಜನರು ವಸ್ತುಗಳನ್ನು ಕೊಳ್ಳುವುದಿಲ್ಲವೆಂದು ಅಲ್ಲಿಗೆ ಬೀದಿ ವ್ಯಾಪಾರಿಗಳು ಹೋಗಲಿಲ್ಲ.
ಮಸಾಲ ಜಯರಾಂ ಶಾಸಕರಾಗಿದ್ದಾಗ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನೆಗಾಗಿ ಕಟ್ಟಡದ ಸುತ್ತಮುತ್ತ ವ್ಯಾಪಾರ ಮಾಡುತ್ತಿದ್ದ ಎಲ್ಲ ಬೀದಿ ಬದಿ ವ್ಯಾಪಾರಿಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೆರವು ಮಾಡಲು ಮುಂದಾದ ವೇಳೆ ಇದನ್ನು ವಿರೋಧಿಸಿ ಬೀದಿ ವ್ಯಾಪಾರಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು.
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಳೆ ಸಂತೆ ಮೈದಾನದಲ್ಲಿ ವ್ಯಾಪಾರಿಗಳಿಗೆ ಸ್ಥಳವಾಕಾಶ ಮಾಡಿಕೊಡಲು ₹5 ಲಕ್ಷ ವೆಚ್ಚದಲ್ಲಿ 80ಕ್ಕೂ ಹೆಚ್ಚು ಫ್ಲಾಟ್‌ಫಾರಂ ನಿರ್ಮಿಸಿಕೊಟ್ಟರು. ಮಸಾಲ ಜಯರಾಂ ವ್ಯಾಪಾರಿಗಳಿಗೆ ದೊಡ್ಡ ಛತ್ರಿ ಸಹ ನೀಡಿದ್ದರು.
ಬೀದಿ ಬದಿ ವ್ಯಾಪಾರಿಗಳು ನಮಗೆ ಮುಖ್ಯ ವ್ಯಾಪಾರಿ ಕೇಂದ್ರವೇ ಬಾಣಸಂದ್ರ-ಮಾಯಸಂದ್ರ ವೃತ್ತ ಮತ್ತು ದಬ್ಬೇಘಟ್ಟ-ವೈಟಿ ವೃತ್ತ. ಪಟ್ಟಣ ಪಂಚಾಯಿತಿ ಕೊಟ್ಟಿರುವ ಸ್ಥಳ ದೂರ ಇದೆ ಜನರು ಅಲ್ಲಿಗೆ ಬರುವುದಿಲ್ಲ ಎಂದು ಎಂದಿನ ಜಾಗದಲ್ಲೇ ವ್ಯಾಪಾರ ಮುಂದುವರೆಸಿದ್ದರು.
ನಂತರ ಶಾಸಕರಾಗಿ ಬಂದ ಎಂ.ಟಿ.ಕೃಷ್ಣಪ್ಪ ಕೂಡ ಬೀದಿ ವ್ಯಾಪಾರಿಗಳ ಬಗ್ಗೆ ಮೃದು ಧೋರಣೆ ತಳೆದಂತಿದ್ದು, ಬೀದಿ ಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವ ವಿಚಾರ ಹಿನ್ನಲೆಗೆ ಸರಿದಿದೆ.
ಬೀದಿಯಲ್ಲಿ ಸವೆದ ಬದುಕು: ಪಟ್ಟಣದ ಬೀದಿ ವ್ಯಾಪಾರಿಗಳಲ್ಲಿ ಬಹುತೇಕರು ಪಟ್ಟಣದಲ್ಲಿ ಸ್ವಂತ ಮನೆ ಇಲ್ಲ. ಬೀದಿ ವ್ಯಾಪಾರ ನೆಚ್ಚಿಕೊಂಡೇ ಮಕ್ಕಳ ವಿದ್ಯಾಭ್ಯಾಸ, ವಯಸ್ಸಾದ ತಂದೆ, ತಾಯಿಯರ ಆರೈಕೆ, ಜೀವನದ ಬಂಡಿ ಸಾಗಿದೆ. ಈ ಹಿಂದೆ ಪ್ರಧಾನ ಮಂತ್ರಿ ಸ್ವಾನಿಧಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ₹10 ಸಾವಿರದಿಂದ ₹2 ಲಕ್ಷದವರೆಗೆ ಸಾಲ ನೀಡುತ್ತಿದ್ದರು. ಈಗ ಅದನ್ನೂ ನಿಲ್ಲಿಸಿದ್ದಾರೆ.
ಪಟ್ಟಣ ಪಂಚಾಯಿತಿಯಿಂದ ಸುಂಕದ ಹರಾಜು ಪಡೆದವರು ₹10ರಿಂದ ₹20ರ ವರೆಗೆ ಕೆಲವೊಂದು ಅಂಗಡಿಗೆ ಹೆಚ್ಚೇ ಸುಂಕ ವಸೂಲಿ ಮಾಡುತ್ತಾರೆ. ಆದರೆ ಅದಕ್ಕೆ ತಕ್ಕಂತೆ ಯೋಗ್ಯ ಮಾರುಕಟ್ಟೆ ಸೌಲಭ್ಯ, ಮೂಲಸೌಕರ್ಯ, ನೆರಳು, ನೀರು, ಗೋದಾಮು, ಶೌಚಾಲಯ ವ್ಯವಸ್ಥೆ ಇಲ್ಲವೆಂದು ಕೆಲ ವ್ಯಾಪಾರಿಗಳು ದೂರಿದ್ದಾರೆ.
ಬೀದಿ ವ್ಯಾಪಾರ ನಿಯಂತ್ರಣ ಅಧಿನಿಯಮ– 2014ರ ಪ್ರಕಾರ ಬೀದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶವಿದೆ. ಪಟ್ಟಣ ಪಂಚಾಯಿತಿ ನೀಡಿರುವ ಸಂತೆ ಮೈದಾನದಲ್ಲಿ ವ್ಯಾಪಾರಕ್ಕೆ ಒಮ್ಮತವಿಲ್ಲ. ಮೂಲ ಸೌಕರ್ಯ ಒದಗಿಸಬೇಕುಮಾರುತಿ ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ
ಸಂತೆ ಮೈದಾನದಲ್ಲಿ ವ್ಯಾಪಾರ ಮಾಡಿದರೆ ಮೂಲ ಸೌಕರ್ಯ ಒದಗಿಸಲಾಗುವುದು. ಪ್ರಮಾಣ ಪತ್ರ ಪಡೆದ ವ್ಯಾಪಾರಿಗಳಿಗೆ ಗುರುತಿನ ಕಾರ್ಡ್ ನೀಡಲಾಗಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ ಡಿಜಿಟಲ್ ವ್ಯಾಪಾರ ಜಾಗೃತಿ ನೀಡಲಾಗಿದೆ.ಶ್ರೀನಾಥ್ ಬಾಬು ಪ.ಪಂ ಮುಖ್ಯಾಧಿಕಾರಿ
ಪಟ್ಟಣದಲ್ಲಿ ವ್ಯಾಪಾರ ಸಮಿತಿಯಿಂದ ಪ್ರಮಾಣ ಪತ್ರ ಪಡೆದ 366 ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಹಳ್ಳಿಗಳಿಂದ ಸಾಕಷ್ಟು ರೈತರು ತಾವು ಬೆಳೆದ ಪದಾರ್ಥಗಳ ಮಾರಾಟಕ್ಕೆ ಪ್ರತಿದಿನ ಬರುತ್ತಾರೆ. ವ್ಯಾಪಾರಕ್ಕೆ ಯಾವುದೇ ಬ್ಯಾಂಕ್‌ನಿಂದ ಕಿರು ಸಾಲ ನೀಡುವುದಿಲ್ಲ. ಬೀದಿ ವ್ಯಾಪಾರಿಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವ್ಯಾಪಾರಿಗಳು ಹಾಗೂ ಜನರಿಗೆ ಅನುಕೂಲವಾಗುವ ಖಾಯಂ ಸ್ಥಳ ನಿಗದಿ ಮಾಡುವ ಸವಾಲು ಶಾಸಕ ಎಂ.ಟಿ.ಕೃಷ್ಣಪ್ಪ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರ ಮುಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.