ADVERTISEMENT

ದೇವರು, ಧರ್ಮದ ಹೆಸರಲ್ಲಿ ದೇಶವನ್ನು ಕಂದಾಚಾರದ ಕೂಪಕ್ಕೆ ಒಯ್ಯಬಾರದು: ಮುಕುಂದರಾಜ್

ವಿದ್ಯಾರ್ಥಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:03 IST
Last Updated 26 ಫೆಬ್ರುವರಿ 2026, 6:03 IST
ತುರುವೇಕೆರೆ ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಪನ್ಯಾಸವನ್ನು ಎಲ್.ಎನ್. ಮುಕುಂದರಾಜ್ ಡ್ರಮ್ ಬಾರಿಸುವ ಮೂಲಕ ಉದ್ಘಾಟಿಸಿದರು
ತುರುವೇಕೆರೆ ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಪನ್ಯಾಸವನ್ನು ಎಲ್.ಎನ್. ಮುಕುಂದರಾಜ್ ಡ್ರಮ್ ಬಾರಿಸುವ ಮೂಲಕ ಉದ್ಘಾಟಿಸಿದರು   

ತುರುವೇಕೆರೆ: ದೇಶವನ್ನೇ ದೇವರು ಎಂದು ಪರಿಭಾವಿಸಿದ ಕುವೆಂಪು ಸಾಹಿತ್ಯ ಸಾರ್ವಕಾಲಿಕ ಶ್ರೇಷ್ಠ ಮೌಲ್ಯಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಸಿದ್ಧ ಮಾದರಿ, ಸ್ಥಾಪಿತ ತತ್ವ, ಸಿದ್ಧಾಂತಗಳನ್ನು ಧಿಕ್ಕರಿಸಿ ಸತ್ಯಶೋಧನೆಯ ಮೂಲಕ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು.

ಪಟ್ಟಣದ ಗ್ಲೋಬೆಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.

‘ಸಂಪಧ್ಬರಿತ, ಬೌದ್ಧಿಕವಾಗಿ ಪ್ರಬಲವಾಗಿದ್ದ ನಮ್ಮ ದೇಶದ ಮೇಲೆ ಸಾಲು ಸಾಲಾಗಿ ಪರಕೀಯರು ದಾಳಿ ಮಾಡಲು ಕಾರಣ ಇಲ್ಲಿನ ನಿಜವಾದ ಮೂಲನಿವಾಸಿಗಳನ್ನು ಅವಿದ್ಯಾವಂತರನ್ನಾಗಿಸುವ ಮೂಲಕ ಅಸಹಾಯಕರನ್ನಾಗಿ ಮಾಡಿದ್ದು. ಬಹುದೊಡ್ಡ ವರ್ಗವನ್ನು ಶಿಕ್ಷಣದಿಂದ ದೂರ ಇಡಲಾಗಿತ್ತು. ಇಂದು ನಮ್ಮ ಸಂವಿಧಾನ ಜಾತಿ, ಧರ್ಮ ಮೀರಿ ಶಿಕ್ಷಣ, ಸಮಾನ ಹಕ್ಕು, ಅವಕಾಶಗಳನ್ನು ನೀಡಿದೆ. ಯಾರು ಬೇಕಾದರೂ ಅಧಿಕಾರಶಾಹಿ, ಆಡಳಿತಶಾಹಿಯ ಅವಿಭಾಜ್ಯ ಅಂಗವಾಗಬಹುದು. ಇಂತಹ ಶ್ರೇಷ್ಠ ಶಿಕ್ಷಣದ ಮೂಲಕ ಸದೃಢ ದೇಶವನ್ನು ನಿರ್ಮಿಸಬೇಕೇ ಹೊರತು ದೇವರು, ಧರ್ಮದ ಹೆಸರಿನಲ್ಲಿ ದೇಶವನ್ನು ಮತ್ತೆ ಕಂದಾಚಾರದ ಕೂಪಕ್ಕೆ ಕೊಂಡೊಯ್ಯಬಾರದು’ ಎಂದು ಸಲಹೆ ನೀಡಿದರು.

ADVERTISEMENT

ಜ್ಯೋತಿ ಮಾತನಾಡಿ ‘ಪ್ರತಿಪಾದಿತ ಜ್ಞಾನವೇ ಅಂತಿಮವಲ್ಲ, ಅದು ಸರ್ವಕಾಲಕ್ಕೂ ಪ್ರಶ್ನಿಸಬಲ್ಲದಾಗಿದ್ದರೆ ಮಾತ್ರ ಅದು ಕಾಲಾತೀತ ಶ್ರೇಷ್ಠತೆ ಪಡೆಯುತ್ತದೆ. ವ್ಯವಸ್ಥೆ ಅಥವಾ ಸಮಾಜ ಒಂದು ಅಲೋಚನಾಕ್ರಮವನ್ನು ರೂಪಿಸುತ್ತದೆ. ಅದನ್ನು ಮೀರಿದ ಸತ್ಯಶೋಧನೆಯ ಜಿಜ್ಞಾಸೆಯೇ ಸಂಶೋಧನೆಗೆ ಪ್ರೇರೇಪಿಸುತ್ತದೆ. ಸ್ಪಂದನೆಯ ಮೂಲಕವೇ ಒಂದು ವಸ್ತುವಿಷಯಕ್ಕೆ ಅರ್ಥ ಹುಟ್ಟಿಕೊಳ್ಳುತ್ತದೆ. ಅನುಭವ, ಕಲ್ಪನೆ, ಸ್ಮೃತಿಗಳ ಮೂಲಕ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ವಿಷಯವನ್ನು ಅರ್ಥೈಸಬಹುದು ಎಂದರು.

ಅಕಾಡೆಮಿ ಸದಸ್ಯೆ ಸುಮಾ ಸತೀಶ್ ಮಾತನಾಡಿ, ಸಾಹಿತ್ಯ ಅಕಾಡೆಮಿ ಗ್ರಾಮೀಣ ಪ್ರದೇಶಗಳಲ್ಲೂ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರಿಂದ ಸ್ಥಳೀಯ ಭಾಷೆ, ಸಂಸ್ಕೃತಿ ಜೊತೆ ಸಾಹಿತ್ಯವನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ ಎಂದರು.

ಸಮಾರಂಭದಲ್ಲಿ ಚಕೋರ ಸಂಚಾಲಕ ನಾಗಭೂಷಣ ಬಗ್ಗನಡು, ಸುಮಾ ಸತೀಶ್, ಗ್ಲೋಬಲ್ ಎಂಬೆಸಿ ಕಾಲೇಜಿನ ಸಂಸ್ಥಾಪಕ ಪ್ರೊ.ಗಂಗಾಧರ ದೇವರಮನೆ, ಸಾಹಿತಿ ಎಂ.ಎನ್. ರಾಮಯ್ಯ, ಪ್ರಸಾದ್, ಟಿ.ಎಚ್. ವಿಶ್ವಾರಾಧ್ಯ, ಉಪನ್ಯಾಸಕರಾದ ಬಸವರಾಜು, ಚಂದನ್, ಶ್ವೇತಾ, ಮಂಜುಳಾ, ಅನುಶ್ರೀ, ರೂಪಾ, ತುಳಸಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.