ಕುಣಿಗಲ್: ಪಟ್ಟಣದ ಹೃದಯ ಭಾಗದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ತಾಲ್ಲೂಕು ಪಂಚಾಯಿತಿ ಆಸ್ತಿ (ಮುಸಾಫೀರ್ ಖಾನಾ) ಶಿಥಿಲಗೊಂಡು ಅನಾಥವಾಗಿದೆ. ಎರಡು ದಶಕ ಕಳೆದರೂ ಜಾಗ ಸಂರಕ್ಷಣೆ ಮಾಡಿ, ಅಭಿವೃದ್ಧಿಪಡಿಸಿ, ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸುವತ್ತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸಿಲ್ಲ.
ಸ್ವಾತಂತ್ರ ಪೂರ್ವದಲ್ಲಿ ಬಸ್ ಸಂಚಾರ ಇಲ್ಲದ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮುಸಾಫೀರ್ ಖಾನಾ ನಿರ್ಮಿಸಲಾಗಿತ್ತು. ಮುಸಾಫಿರ್ ಖಾನಾದಲ್ಲಿ ತಂಗುತ್ತಿದ್ದ ಪ್ರಯಾಣಿಕರಿಗೆ ಪಕ್ಕದಲ್ಲಿದ್ದ ಜೋಡಿದಾರ ಸಿ.ಡಿ.ರಾಮಸ್ವಾಮಿ ಛತ್ರದಲ್ಲಿ ನಿರಂತರ ದಾಸೋಹ, ಊಟ, ಉಪಚಾರ ನಡೆಯುತ್ತಿದ್ದವು.
ಸ್ವಾತಂತ್ರ ನಂತರ ಮುಸಾಫೀರ್ ಖಾನಾ ತಾಲ್ಲೂಕು ಬೋರ್ಡ್‌ಗೆ ಸೇರಿದ್ದು, ನಂತರ ತಾಲ್ಲೂಕು ಪಂಚಾಯಿತಿ ಸ್ವತ್ತಾಗಿದೆ. ಮುಸಾಫೀರ್ ಖಾನಾವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗಾಗಿ ಬಳಕೆಯಾಗಿತ್ತು. ನಂತರ ಮುಂಭಾಗ ಮಳಿಗೆಗಳು ನಿರ್ಮಾಣಗೊಂಡು ಬಾಡಿಗೆ ಹಣವೂ ಪಂಚಾಯಿತಿಯ ಆರ್ಥಿಕ ಸಂಪನ್ಮೂಲಕ್ಕೆ ಸೇರ್ಪಡೆಯಾಗುತ್ತಿದ್ದು, ಕಾಲ ಕ್ರಮೇಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಬೇರೆಡೆಗೆ ಸ್ಥಳಾಂತರಗೊಂಡಿತು. ಜಿಲ್ಲಾ ಪಂಚಾಯಿತಿ ಎಂಜನಿಯರಿಂಗ್ ವಿಭಾಗದ ಕಚೇರಿ ಪ್ರಾರಂಭವಾಗಿತ್ತು.
ಕಟ್ಟಡ ಶಿಥಿಲವಾದ ಕಾರಣ ಕಚೇರಿ ಸ್ಥಳಾಂತರವಾಯಿತು. ರಸ್ತೆ ವಿಸ್ತರಣೆ ನೆಪದಲ್ಲಿ ಮಳಿಗೆಗಳನ್ನು ತೆರವುಗೊಳಿಸಲಾಯಿತು. ನಂತರ ಜಾಗದಲ್ಲಿ ಯಾವ ನಿರ್ಮಾಣಕಾರ್ಯವಾಗದ ಕಾರಣ ಗೂಡಂಗಡಿಗಳು ನಿರ್ಮಾಣವಾಗಿದ್ದು, ಕಟ್ಟಡಗಳು ಶಿಥಿಲವಾಗಿರುವ ಜಾಗ ಮಲ ಮೂತ್ರ ವಿಸರ್ಜನೆಗೆ ಬಳಕೆಯಾಗುತ್ತಿದೆ.
1990ರ ದಶಕದಲ್ಲಿ ತಾಲ್ಲೂಕು ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳ ಆಡಳಿತವಿದ್ದಾಗ ವರಲಕ್ಷ್ಮಿ ಅಧ್ಯಕ್ಷೆ, ಎಸ್.ಆರ್.ಚಿಕ್ಕಣ್ಣ ಉಪಾಧ್ಯಕ್ಷ ಮತ್ತು ಬಿ.ಎನ್. ಲೋಕೇಶ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾಗ ಪುರಸಭೆಗೆ ಕಂದಾಯ ಪಾವತಿ ಮಾಡಿ ಅಧಿಕೃತ ದಾಖಲೆಗಳನ್ನು ಪಡೆಯಲಾಗಿತ್ತು. 12ನೇ ಹಣಕಾಸು ಯೋಜನೆಯ ಹಣ ಸೇರಿದಂತೆ ಎಸ್‌ಬಿಎಂ ಬ್ಯಾಂಕ್‌ನ ಸಹಾಯದಿಂದ ₹2 ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಮುಂದಾಗಿದ್ದು, ಅಧಿಕಾರಿಗಳ ಅನುಮತಿ ದೊರೆಯದೆ ಮತ್ತು 12ನೇ ಹಣಕಾಸು ಯೋಜನೆಯ ಹಣ ಬಳಕೆಗೆ ತಾಂತ್ರಿಕ ಸಮಸ್ಯೆಯಾಗಿ ಇಡೀ ಯೋಜನೆ ಸ್ಥಗಿತಗೊಂಡಿದೆ. ಮುಂದಿನ ದಿನಗಳಲ್ಲಿ ಪಟ್ಟಣದ ಮದ್ದೂರು ರಸ್ತೆಯ ಟಿಎಪಿಎಂಎಸ್ ಕಲ್ಲು ಕಟ್ಟಡ ಪಕ್ಕದಿಂದ ರಾಘವೇಂದ್ರ ಸ್ವಾಮಿ ಮಠದವರೆಗಿನ ಅತ್ಯಮೂಲ್ಯ ಆಸ್ತಿ ಅನಾಥವಾಗಿದೆ.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಆರ್. ಚಿಕ್ಕಣ್ಣ ಮಾತನಾಡಿ, ತಾಲ್ಲೂಕಿನಲ್ಲಿ ಜನಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದೆ ಐದು ವರ್ಷ ಕಳೆದಿವೆ. ಸರ್ಕಾರಿ ಆಸ್ತಿ ಸಂರಕ್ಷಣೆಗೆ ಮತ್ತೂ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಶಾಸಕರು ಇಚ್ಛಾಶಕ್ತಿ ತೋರಬೇಕಿದೆ. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಸಮರ್ಥ ಅಧಿಕಾರಿಗಳು ಇದ್ದಾರೆ. ಅನಾಥವಾಗಿರುವ ತಾಲ್ಲೂಕು ಪಂಚಾಯಿತಿ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ, ಹತ್ತಾರು ಮಂದಿಗೆ ನೀಡಿ, ಇಲ್ಲದಿದ್ದರೆ ಜಾಗವನ್ನು ಸ್ವಚ್ಛಗೊಳಿಸಿ ಸಂರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.