ADVERTISEMENT

ತಿಪಟೂರು: ಒಂದೇ ದಿನ ಎರಡು ಚಿರತೆ ಬೋನಿಗೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:18 IST
Last Updated 19 ಜನವರಿ 2026, 6:18 IST
   

ತಿಪಟೂರು: ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಚೆಕೊಪ್ಪಲು, ಕರೀಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದೆ.

ಒಂದು ತಿಂಗಳಿನಿಂದ ಚಿರತೆ ಹಾವಳಿ ಹೆಚ್ಚಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಬೋನು ಇರಿಸಿತ್ತು.

ಚಿರತೆ ಬೋನಿಗೆ ಬಿದ್ದ ಸುದ್ದಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಆದರೆ ಈವರೆಗೆ ಚಿರತೆ ಹಾವಳಿಯಿಂದ ಆದ ಜಾನುವಾರು ನಷ್ಟಕ್ಕೆ ಪರಿಹಾರ ನೀಡದಿರುವ ಬಗ್ಗೆ ರೈತರು ಪ್ರಶ್ನಿಸಿದಾಗ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಪ್ರತಿಭಟನೆಗೆ ಕಾರಣವಾಯಿತು. ಹೊನ್ನವಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ADVERTISEMENT

ಈವರೆಗೆ ರೈತ ಮಂಜುನಾಥ್ ಅವರ ಎಂಟು ಕುರಿ, ಶರತ್ ಅವರ ಎರಡು ಕುರಿ ಹಾಗೂ ರಾಜಣ್ಣ ಅವರ ಎಂಟು ಕುರಿಗಳು ಚಿರತೆಗೆ ಬಲಿಯಾಗಿದ್ದು, ಯಾವುದೇ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ದೂರಿದರು.

ಅರಣ್ಯ ಅಧಿಕಾರಿ ಅರುಣ್‌ಕುಮಾರ್ ಪ್ರತಿಕ್ರಿಯಿಸಿ, ಪರಿಹಾರ ಪಡೆಯಬೇಕಾದರೆ ಪ್ರಾಣಿಗಳ ಅವಶೇಷ ಅವಶ್ಯಕ. ಆನಂತರ ಪರಿಹಾರ ಹಣವನ್ನು ನೀಡಲು ಸಾಧ್ಯ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಕುರಿಗಳನ್ನು ಚಿರತೆ ಹೊತ್ತೊಯ್ಯುವ ವಿಡಿಯೊ ದಾಖಲೆಗಳಿದ್ದರೂ, ಮೃತ ಜಾನುವಾರದ ಭಾಗಗಳನ್ನು ನೀಡುವಂತೆ ಅರಣ್ಯ ಇಲಾಖೆ ಕೇಳುತ್ತಿರುವುದು ಸರಿಯಲ್ಲ ಎಂದರು.

ಚಿರತೆ ಹಿಡಿಯಲು ಬೋನು ಇಡುವಂತೆ ಅರಣ್ಯ ಇಲಾಖೆಯನ್ನು ಕೇಳಿದರೆ ರೈತರೇ ಮುಂದಾಗಿ ಬೋನು ವ್ಯವಸ್ಥೆ ಮಾಡಿಕೊಳ್ಳಿ. ನಿಮ್ಮದೇ ವಾಹನದಲ್ಲಿ ಬೋನ್ ತೆಗೆದುಕೊಂಡು ಹೋಗಿ ಎಂದು ತಿಳಿಸುತ್ತಾರೆ ಎಂದು ಗ್ರಾಮಸ್ಥ ಸಿದ್ಧೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಚಿರತೆ ಕಾಣಿಸಿಕೊಂಡಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮೇಲಧಿಕಾರಿಗಳು ಸಹ ಈ ಭಾಗಕ್ಕೆ ಬಂದು ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದಿಲ್ಲ. ನಮಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.