ಪರಾರಿ (ಪ್ರಾತಿನಿಧಿಕ ಚಿತ್ರ)
ತುಮಕೂರು: ನಗರದ ದಿಬ್ಬೂರು ಬಳಿಯ ವಿದೇಶಿ ಮಹಿಳೆಯರ ಬಂಧನ ಕೇಂದ್ರದಿಂದ ಶನಿವಾರ ರಾತ್ರಿ ಬಾಂಗ್ಲಾದೇಶದ ಇಬ್ಬರು ಮಹಿಳೆಯರು ತಪ್ಪಿಸಿಕೊಂಡಿದ್ದಾರೆ.
ರೇಷ್ಮಾ (45), ಲಿಜಾ ಶೈಕಾ (25) ಪರಾರಿಯಾದ ಮಹಿಳೆಯರು. ವೀಸಾ ಅವಧಿ ಮುಗಿದ ಕಾರಣ ಎರಡು ತಿಂಗಳ ಹಿಂದೆ ಇವರನ್ನು ಕೇಂದ್ರಕ್ಕೆ ಕರೆ ತರಲಾಗಿತ್ತು.
‘ಮಹಿಳೆಯರು ವಾಸವಿದ್ದ ಕೋಣೆಯಲ್ಲಿ ಪರಿಶೀಲನೆ ನಡೆಸಿದಾಗ ಚಾವಣಿಯಿಂದ ಹಾರಿ ತಪ್ಪಿಸಿಕೊಂಡು ಹೋಗಿದ್ದಾರೆ’ ಎಂದು ಕೇಂದ್ರದ ಕಾರ್ಯದರ್ಶಿ ಜಿ.ಬಿ.ಮಾರೆಪ್ಪ ನಗರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವೀಸಾ ಅವಧಿ ಮುಗಿದವರು ಮತ್ತು ಅಕ್ರಮವಾಗಿ ದೇಶದೊಳಗೆ ನುಸುಳಿದ 21 ವಿದೇಶಿ ಮಹಿಳೆಯರು ಸದ್ಯ ಈ ಕೇಂದ್ರದಲ್ಲಿದ್ದಾರೆ.
‘ಕೇಂದ್ರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೇಗೆ ತಪ್ಪಿಸಿಕೊಂಡರು ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕರ್ತವ್ಯದಲ್ಲಿದ್ದ ಸಿಬ್ಬಂದಿ, ವಾರ್ಡನ್, ಕಾರ್ಯದರ್ಶಿ ಇತರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆಯ ನಂತರವೇ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.